ಟ್ವೆಂಟಿ-20 ವಿಶ್ವಕಪ್: ಗ್ರೂಪ್ ಪ್ರಕಟಿಸಿದ ಐಸಿಸಿ, ಪಾಕ್ ,ನ್ಯೂಝಿಲ್ಯಾಂಡ್, ಅಫ್ಘಾನ್ ನೊಂದಿಗೆ ಭಾರತಕ್ಕೆ ಸ್ಥಾನ

ದುಬೈ: ಐಸಿಸಿ ಪುರುಷರ ಟ್ವೆಂಟಿ- 20 ವಿಶ್ವಕಪ್ 2021 ರ ಗುಂಪುಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದೆ. ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಓಮಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ನಡೆಯಲಿದೆ.
ಮಾರ್ಚ್ 20 ರವರೆಗೆ ತಂಡದ ಶ್ರೇಯಾಂಕದ ಆಧಾರದ ಮೇಲೆ ಎರಡು ಗುಂಪುಗಳನ್ನು ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಸೂಪರ್-12 ರ ಗುಂಪು-1 ರಲ್ಲಿದ್ದರೆ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ಗುಂಪು-2 ರಲ್ಲಿದೆ.
ಸ್ವಯಂ ಆಗಿ ಅರ್ಹತೆ ಪಡೆದಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸೇರಿದಂತೆ ಎಂಟು ತಂಡಗಳು ಮೊದಲ ಸುತ್ತಿನಲ್ಲಿ ಸ್ಪರ್ಧಿಸಲಿವೆ. ಲಂಕಾ, ಬಾಂಗ್ಲಾ ಹೊರತುಪಡಿಸಿ ಉಳಿದ ಆರು ತಂಡಗಳು 2019 ರಲ್ಲಿ ನಡೆದಿರುವ ಅರ್ಹತಾ ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವಕಪ್ ನಲ್ಲಿ ಸ್ಥಾನ ಪಡೆದಿವೆ.
ಮೊದಲ ಸುತ್ತಿನ 'ಎ' ಗುಂಪಿನಲ್ಲಿ ಶ್ರೀಲಂಕಾವನ್ನು ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ಸೇರಿಕೊಳ್ಳಲಿದ್ದು, 'ಬಿ' ಗುಂಪಿನಲ್ಲಿ ಬಾಂಗ್ಲಾದೇಶವನ್ನು ಒಮಾನ್, ಪಪುವಾ ನ್ಯೂಗಿನಿ ಮತ್ತು ಸ್ಕಾಟ್ಲೆಂಡ್ ತಂಡವನ್ನು ಸೇರಿಕೊಳ್ಳಲಿದೆ.
'ಎ' ಹಾಗೂ 'ಬಿ' ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್-12ಕ್ಕೆ ತೇರ್ಗಡೆಯಾಗಲಿವೆ.







