ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿ ಮುಂದುವರಿಕೆ:ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು, ಜು.16: ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಅದೇ ಮಾದರಿಯಲ್ಲಿ ಮುಂದುವರಿಸುತ್ತಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಕೃಷಿ ಅಧಿಕಾರಿಗಳ ಜೊತೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಜಿಲ್ಲೆಗಳಲ್ಲಿನ ಪ್ರಗತಿ ಕುರಿತು ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆ ಎಲ್ಲ ವರ್ಗದ 2 ಹೆಕ್ಟೇರ್ ಭೂಮಿಯುಳ್ಳ ರೈತರಿಗೆ ಶೇ.90 ರಷ್ಟು, 5 ಹೆಕ್ಟೇರ್ ಭೂಮಿಯುಳ್ಳ ರೈತರಿಗೆ ಶೇ.45 ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಸಿಎಂ ಆದೇಶದ ನಿರ್ಧಾರದಂತೆ ಇದೀಗ ಮತ್ತೆ ಅದೇ ಹಳೆಯ ಮಾದರಿಯ ಸಬ್ಸಿಡಿಯನ್ನು ಮುಂದುವರೆಸಲಾಗುತ್ತಿದ್ದು, 5 ಹೆಕ್ಟೇರ್ ಮೇಲ್ಪಟ್ಟ ಯಾವುದೇ ರೈತರಿಗೆ ಸಬ್ಸಿಡಿ ಇರುವುದಿಲ್ಲ ಎಂದು ಹೇಳಿದರು.
ಇನ್ನು ಮುಂದೆ ರೈತರ ಆರ್.ಟಿ.ಸಿ ಪಹಣಿಯಲ್ಲಿ ಬೆಳೆ ಸಮೀಕ್ಷೆ ವಿವರ ನಮೂದು: ಕಳೆದ ಬಾರಿ ರೈತರಿಂದಲೇ ಬೆಳೆ ಸಮೀಕ್ಷೆಯನ್ನು ನಡೆಸುವ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ವಿಯಾಗಿದ್ದು, ಕೇಂದ್ರದಿಂದ ಮೆಚ್ಚುಗೆಯನ್ನು ಪಡೆದಿದೆ. ಅಲ್ಲದೇ ಕರ್ನಾಟಕ “ಅಗ್ರಿ ಟ್ರೆಂಡ್ ಸೆಕ್ಟರ್” ಎನ್ನುವ ಕೇಂದ್ರದ ಶ್ಲಾಘನೆಗೂ ಪಾತ್ರವಾಗಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಈ ವರ್ಷವೂ ಕಳೆದ ವರ್ಷದಂತೆ ರೈತನೇ ತನ್ನ ಬೆಳೆಗೆ ತಾನೇ ಸಮೀಕ್ಷೆ ನಡೆಸಿ ತಾನೇ “ನನ್ನ ಬೆಳೆ ನನ್ನ ಹಕ್ಕು” ಎಂದು ಪ್ರಮಾಣಪತ್ರ ನೀಡುವ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಈ ವರ್ಷವೂ ಮುಂಗಾರು ಹಂಗಾಮಿನಲ್ಲಿ ಸುಮಾರು 2.10 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ರೈತರೇ ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವಂತೆ ಮನವಿ ಮಾಡಲಾಗಿದ್ದು, 2021-22ನೇ ಸಾಲಿನಲ್ಲಿ ಪೂರ್ವ ಮುಂಗಾರಿನಲ್ಲಿ ಇಲ್ಲಿಯವರೆಗೆ 1.09 ಲಕ್ಷ ತಾಕುಗಳನ್ನು ರೈತರೇ ಸ್ವತಃ ಆ್ಯಪ್‍ನಲ್ಲಿ ಹಾಗೂ 28.96 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಮೂಲಕ ಆ್ಯಪ್‍ನಲ್ಲಿ ಅಪ್ಡೇಟ್ ಮಾಡಲಾಗಿದೆ. ಪ್ರಸಕ್ತ ವರ್ಷದಿಂದ ರೈತರ ಬೆಳೆ ಸಮೀಕ್ಷೆ ಮಾಹಿತಿ ಇನ್ನುಮುಂದೆ ರೈತರ ಆರ್.ಟಿ.ಸಿ. ಪಹಣಿಯಲ್ಲಿ ನಮೂದಾಗಲಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ನಿಗದಿತ ಸಮಯದೊಳಗೆ ಬೆಳೆ ವಿಮೆ: 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಟ್ಟು 36 ಬೆಳೆಗಳನ್ನು ಬೆಳೆ ವಿಮೆಗೆ ನೋಂದಾಯಿಸಲು ಅಧಿಸೂಚಿಸಲಾಗಿದ್ದು, ಇಲ್ಲಿಯವರೆಗೆ 3.71 ಲಕ್ಷ ರೈತರು 3504.06 ಲಕ್ಷ ರೂ. ಮೊತ್ತದ ಪ್ರೀಮಿಯಮ್ ಮೊತ್ತ ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗೆ ಸಮೀಪದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದ್ದು, ನಿಗದಿತ ಸಮಯದೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ರೈತ ಬಾಂಧವರಲ್ಲಿ ಅವರು ಮನವಿ ಮಾಡಿದರು.
ಇದೂವರೆಗೂ ಯಾವುದೇ ರಸಗೊಬ್ಬರ, ಕೊರತೆಯಾಗಿಲ್ಲ: ಯಾವುದೇ ರಸಗೊಬ್ಬರವಾಗಲೀ ಬಿತ್ತನೆ ಬೀಜಕ್ಕಾಗಲೀ ಕೊರತೆ ಕಂಡುಬಂದಿಲ್ಲ. ರೈತರ ಅಗತ್ಯಕ್ಕನುಸಾರವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಪೂರೈಸಲು ಇಲಾಖೆ ಸಜ್ಜಾಗಿದ್ದು, ಕಾಳಸಂತೆಯಾಗಲೀ ಅಥವಾ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದಾಗಲೀ ಡೀಲರ್ಸ್‍ಗಳಾಗಲೀ, ಮಾರಾಟಗಾರರಾಗಲೀ ಯಾರೂ ಮಾಡಬಾರದು ಎಂದು ಅವರು ಸೂಚಿಸಿದರು.
ಇಂತಹ ಕಾಳದಂಧೆಕೋರರ ಮೇಲೆ ಕೃಷಿ ವಿಚಕ್ಷಣಾ ಕಳೆದ ಬಾರಿಯಂತೆ ಈ ಬಾರಿಯೂ ತನ್ನ ಹದ್ದಿನ ಕಣ್ಣು ನೆಟ್ಟಿದ್ದು, ಇಂತಹ ಅಕ್ರಮ ಕಂಡುಬಂದಲ್ಲಿ ರೈತರಿಗೆ ಅನ್ಯಾಯವೆಸಗುವವರ ಮೇಲೆ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಮತ್ತೊಮ್ಮೆ ಎಚ್ಚರಿಸಿದರು.
ಮುಂಗಾರು ಹಂಗಾಮಿನಲ್ಲಿ ಈ ಬಾರಿ 77 ಲಕ್ಷ ಹೆಕ್ಟೇರ್ ಗುರಿ ಹೊಂದಿದ್ದು, ಇಲ್ಲಿಯವರೆಗೆ 44.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ.57.38ರಷ್ಟು ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 8 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದೆ. 3.12 ಲಕ್ಷ ಕ್ವಿಂಟಾಲ್ ವಿತರಣೆಯಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 0.55 ಲಕ್ಷ ಕ್ವಿಂಟಾಲ್ ದಾಸ್ತಾನುಯಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಏಪ್ರಿಲ್‍ನಿಂದ ಜುಲೈವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಸೇರಿದಂತೆ ಒಟ್ಟು 17,44,448 ಮೆ.ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ 11,54,320 ಆರಂಭಿಕ ಶಿಲ್ಕು, ಏಪ್ರಿಲ್‍ನಿಂದ ಜು.16 ರವರೆಗೆ 13,41,714 ಮೆ.ಟನ್ ಸರಬರಾಜು ಆಗಿದೆ. 24,96,034 ಮೆ.ಟನ್ ಒಟ್ಟು ದಾಸ್ತಾನು ಇದ್ದು, 14,61,424 ಮೆ.ಟನ್ ಮಾರಾಟ, 10,34,610 ಉಳಿಕೆ ದಾಸ್ತಾನು ಇದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.







