ಬಕ್ರೀದ್ ಹಿನ್ನೆಲೆ: ಜಾನುವಾರುಗಳ ಅಧಿಕೃತ ಮಾರಾಟವನ್ನೇ ನಿಷೇಧಿಸಿದ ಕಲಬುರಗಿ ಜಿಲ್ಲಾಡಳಿತ!

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.16: ರಾಜ್ಯಾದ್ಯಂತ ಜು.21ರಂದು ಬಕ್ರೀದ್ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರ ಅನ್ವಯ, ಕಲಬುರಗಿ ಜಿಲ್ಲೆಯಾದ್ಯಂತ ಜಾನುವಾರುಗಳ ಅಧಿಕೃತ ಮಾರಾಟ, ಸಾಗಾಣಿಕೆ ಮಾಡುವುದು ಮತ್ತು ಜಾನುವಾರುಗಳ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಾನುವಾರುಗಳ ಅನಧಿಕೃತ ಮಾರಾಟ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ಸಂಬಂಧವಾಗಿ ಜಾನುವಾರು ರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಜು.13 ರಿಂದ 21ರವರೆಗೆ ಜಾನುವಾರುಗಳ ಅಧಿಕೃತ ಮಾರಾಟ, ಸಾಗಾಣಿಕೆ ಮಾಡುವುದು ಮತ್ತು ಜಾನುವಾರುಗಳ ಜಾತ್ರೆಗಳನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆದರೆ, ಜಿಲ್ಲಾಧಿಕಾರಿಗಳು ಅಧಿಕೃತ ಮಾರಾಟವನ್ನು ನಿಷೇಧಿಸಿರುವುದಕ್ಕೆ ಸ್ಥಳೀಯ ಜಾನುವಾರುಗಳ ವ್ಯಾಪಾರಿಗಳು, ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ ಮಾರಾಟ ಮಾಡಲು ಅವಕಾಶವಿರುವ ಜಾನುವಾರುಗಳಿಗೂ ಅವಕಾಶ ನೀಡದಿದ್ದರೆ ಹೇಗೆ? ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
ಜಾನುವಾರುಗಳ ಸಂತೆಯಲ್ಲಿ ಕೇವಲ ವಧೆಗಾಗಿ ಅಷ್ಟೇ ಮಾರಾಟ ಮಾಡುವುದಿಲ್ಲ. ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ರೈತರು ಜಾನುವಾರುಗಳನ್ನು ಖರೀದಿಸಲು ಆಗಮಿಸುತ್ತಾರೆ. ಆದರೆ, ಜಿಲ್ಲಾಡಳಿತದ ಈ ತೀರ್ಮಾನದಿಂದ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ ಎಂದು ಹೆಸರು ಹೇಳಲು ಇಚ್ಛಿಸದ ಜಾನುವಾರು ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾನೂನಿನ ಪ್ರಕಾರ ನಿಷೇಧಿಸಿರುವ ಜಾನುವಾರುಗಳ ಮಾರಾಟ, ಸಾಗಾಣಿಕೆಯನ್ನು ಜಿಲ್ಲಾಡಳಿತ ನಿಷೇಧ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅಧಿಕೃತವಾಗಿ ನಡೆಯುವ ವ್ಯಾಪಾರಕ್ಕೂ ನಿಷೇಧ ಹೇರಿದರೆ, ಈಗಾಗಲೆ ಸಂಕಷ್ಟಕ್ಕೆ ಸಿಲುಕಿರುವ ರೈತರು, ಜಾನುವಾರು ವ್ಯಾಪಾರಿಗಳ ಪರಿಸ್ಥಿತಿ ಏನಾಗಬೇಕು. ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವುದು ಉತ್ತಮ.
ಡಾ.ಮುಹಮ್ಮದ್ ಅಸ್ಗರ್ ಚುಲ್ಬುಲ್,
-ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಜಾನುವಾರುಗಳ ರಕ್ಷಣೆಯ ದೃಷ್ಟಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಸರಿಯಾದ ಸಮಯಕ್ಕೆ ಸೂಕ್ತವಾದ ತೀರ್ಮಾನವನ್ನು ಕೈಗೊಂಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
ಪ್ರಭು ಚವ್ಹಾಣ್, ಪಶುಸಂಗೋಪನೆ ಸಚಿವ
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ನಾಗರಿಕರಾಗಿ ನಾವೆಲ್ಲರೂ ಕಾನೂನಿಗೆ ಗೌರವ ಕೊಡಬೇಕು. ಆದರೆ, ಗೋ ರಕ್ಷಣೆಯ ಹೆಸರಿನಲ್ಲಿ ಕೆಲವು ಸಂಘಟನೆಗಳು ಕಾನೂನು ಕೈಗೆತ್ತಿಕೊಂಡು ಬಡವರು, ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ. ಜಿಲ್ಲಾಡಳಿತ ಇಂತಹ ಆದೇಶ ಹೊರಡಿಸುವ ಮುನ್ನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಗಮನ ಹರಿಸಬೇಕು.
ನಾಸೀರ್ ಉಸ್ತಾದ್, ಜೆಡಿಎಸ್ ಮುಖಂಡ
ಕಲಬುರಗಿ ಜಿಲ್ಲಾಡಳಿತ ಹೊರಡಿಸಿರುವ ಆದೇಶ ಜನ ವಿರೋಧಿಯಾಗಿದೆ. ಅನಧಿಕೃತವಾಗಿ ಜಾನುವಾರುಗಳ ಮಾರಾಟ, ಸಾಗಾಣಿಕೆ ತಡೆಯಲು ಅಧಿಕೃತವಾದ ವ್ಯಾಪಾರವನ್ನು ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ತಾವೊಬ್ಬ ಜಿಲ್ಲಾಧಿಕಾರಿ ಅನ್ನೋದನ್ನು ಮರೆತು, ಬಿಜೆಪಿ ಸರಕಾರದ ಪ್ರತಿನಿಧಿಯಂತೆ ನಡೆದುಕೊಳ್ಳುವುದು ಸರಿಯಲ್ಲ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಕಲ್ಪಿಸಲಾಗಿದೆ. ಇಂತಹ ಆದೇಶಗಳು ಜನಸಾಮಾನ್ಯರಿಗೆ ಇರುವ ಹಕ್ಕುಗಳನ್ನು ಕಸಿಯುವಂತೆ ಮಾಡುತ್ತಿವೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡುತ್ತೇವೆ.
ಶರಣಬಸಪ್ಪ ಮಮಶೆಟ್ಟಿ, ಸಿಪಿಎಂ ಜಿಲ್ಲಾ ಮುಖಂಡ







