ಕಯ್ಯಾರ ಕಿಞ್ಞಣ್ಣರೈ-ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ: ಡಾ.ಸಿ.ಸೋಮಶೇಖರ

ಬೆಂಗಳೂರು, ಜು.16: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಿರಿಯ ಸಾಹಿತಿ ಹಾಗೂ ಕನ್ನಡ ಏಕೀಕರಣದ ಹೋರಾಟಗಾರ ಕಯ್ಯಾರ ಕಿಞ್ಞಣ್ಣರೈ ಹಾಗೂ ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ಗಡಿನಾಡಿನ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಗಡಿಭಾಗದಲ್ಲಿ ಬರುವ 63 ಗಡಿ ತಾಲೂಕುಗಳಲ್ಲಿ ಹಾಗೂ ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ಹೊರರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ವಿಶೇಷವಾಗಿ ಕನ್ನಡ ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಉತ್ಸವ, ಚಿಂತನಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗಡಿಭಾಗದಲ್ಲಿ ನಿರಂತರ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದರು.
ಗಡಿನಾಡಿನ ಹಿರಿಯ ಸಾಧಕರ ಹಾಗೂ ಗಡಿಭಾಗದ ಐತಿಹಾಸಿಕ ಮಹತ್ವವನ್ನು ಸಾರುವ ವಿಶೇಷ ಸಮಗ್ರ ಸಾಕ್ಷ್ಯಚಿತ್ರ ನಿರ್ಮಾಣ, ಗಡಿಭಾಗದಲ್ಲಿನ ಜಾನಪದ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಜಾನಪದ ಅಧ್ಯಯನ, ಗಡಿಭಾಗದಲ್ಲಿನ ಕನ್ನಡ ದಾರ್ಶನಿಕರ ಸ್ಮಾರಕಗಳ ಅಧ್ಯಯನ, ಸಮೂಹ ಮಾಧ್ಯಮಗಳ ಮೂಲಕ ಗಡಿಭಾಗದ ಜನರ ಜೀವನ ದರ್ಶನ ಮಾಡಿಸುವಂತಹ ಅನೇಕ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ಮಾಹಿತಿ ನೀಡಿದ್ದಾರೆ.
ಗಡಿಭಾಗದಲ್ಲಿನ ಕನ್ನಡ ಶಾಲೆಗಳಿಗೆ ವಿಶೇಷವಾಗಿ ಸ್ಮಾರ್ಟ್ ತರಗತಿಗಳನ್ನು ನಡೆಸಲು ಅನುಕೂಲವಾಗುವಂತಹ ತಾಂತ್ರಿಕ ಸಲಕರಣೆಗಳ ಪೂರೈಕೆ, ಗ್ರಂಥಾಲಯ, ಶೌಚಾಲಯಗಳ ನಿರ್ಮಾಣ, ಶುದ್ಧಕುಡಿಯುವ ನೀರಿನ ಪೂರೈಕೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಪ್ರಕಾಶ್ ಮತ್ತೀಹಳ್ಳಿ, ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಇತರೆ ಇಲಾಖೆಯ ಅಧಿಕಾರಿ, ಸದಸ್ಯರುಗಳು ಭಾಗವಹಿಸಿದ್ದರು.







