ಮೇಕೆದಾಟು ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ಹೊಸದಿಲ್ಲಿ, ಜು.16: ಮೇಕೆದಾಟು ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಯೋಜನೆಯ ಜಾರಿಯಿಂದಾಗಿ ತಮಿಳುನಾಡಿಗೆ ಯಾವುದೆ ತೊಂದರೆ ಇಲ್ಲ. ಕಾನೂನಿನ ಚೌಕಟ್ಟಿನಲ್ಲಿ ನಮಗಿರುವ ಅವಕಾಶವನ್ನು ಬಳಸಿಕೊಂಡು ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡಲಾಗಿದೆ. ಆದರೂ, ಅವರು ಹಠ ಬಿಡುತ್ತಿಲ್ಲ. ಕೇಂದ್ರ ಜಲಶಕ್ತಿ ಸಚಿವರು, ಪ್ರಧಾನಿ ಹಾಗೂ ಇನ್ನಿತರ ಸಚಿವರಿಗೂ ಈ ಯೋಜನೆಯ ಕುರಿತು ಮಾಹಿತಿ ನೀಡಲಾಗುವುದು ಎಂದರು.
ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಹೊಸದಿಲ್ಲಿಗೆ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇನ್ನಿತರ ಪ್ರಮುಖರನ್ನು ಭೇಟಿಯಾಗಲಿದ್ದೇನೆ ಎಂದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿದರೆ ಖಂಡಿತವಾಗಿಯೂ ನಿಮಗೆ(ಮಾಧ್ಯಮದವರಿಗೆ) ತಿಳಿಸುತ್ತೇನೆ ಎಂದರು.
ಸಿಎಂ ದಿಲ್ಲಿ ಯಾತ್ರೆ, ಸಚಿವರ ಮನಸ್ಸಿನಲ್ಲಿ ತಳಮಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಕಾಏಕಿ ದಿಲ್ಲಿಗೆ ಭೇಟಿ ನೀಡಿರುವುದು ಸಚಿವ ಸಂಪುಟದ ಹಲವು ಸಚಿವರ ಮನಸ್ಸಿನಲ್ಲಿ ತಳಮಳ ಉಂಟು ಮಾಡಿದೆ. ಸಚಿವ ಸಂಪುಟವನ್ನು ವಿಸ್ತರಣೆ ಅಥವಾ ಪುನರ್ ರಚನೆ ಮಾಡಿ ಮುನಿರತ್ನ ಸೇರಿದಂತೆ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಂಡು, ಹಾಲಿ ಸಚಿವರ ಪೈಕಿ ಹಲವರನ್ನು ಕೈ ಬಿಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಂದು ಕಡೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಿರುವ ಬೆನ್ನಲ್ಲೆ, ಯಡಿಯೂರಪ್ಪ ತಮ್ಮೊಂದಿಗೆ ಯಾವ ಸಚಿವರನ್ನು ಹೊಸದಿಲ್ಲಿಗೆ ಕರೆದುಕೊಂಡು ಬರದೆ ಇರುವುದು ಕುತೂಹಲ ಕೆರಳಿಸಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿ ದಿಲ್ಲಿ ಭೇಟಿ ವೇಳೆ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರು ಜೊತೆಯಲ್ಲಿರುತ್ತಿದ್ದರು.
ಆದರೆ, ಈ ಬಾರಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಲೇಹರ್‍ಸಿಂಗ್ ಸೇರಿದಂತೆ ಕೆಲವು ಅಧಿಕಾರಿಗಳನ್ನು ಮಾತ್ರ ತಮ್ಮೊಂದಿಗೆ ಯಡಿಯೂರಪ್ಪ ದಿಲ್ಲಿಗೆ ಕರೆದುಕೊಂಡು ಬಂದಿದ್ದಾರೆ.







