ಕುಲಶೇಖರ ಬಳಿ ರೈಲು ಹಳಿಗೆ ಮಣ್ಣು ಕುಸಿತ: ಕೊಂಕಣ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ

ಉಡುಪಿ, ಜು.16: ಇಂದು ಮಂಗಳೂರು ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ತಡೆಗೋಡೆ ಸಹಿತ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಮಾರ್ಗದ ಕೆಲವು ರೈಲುಗಳ ಸಂಚಾರವನ್ನು ದಿನದ ಮಟ್ಟಿಗೆ ರದ್ದುಪಡಿಸಿದರೆ ಇನ್ನು ಕೆಲವು ರೈಲುಗಳ ಸಂಚಾರವನ್ನು ಭಾಗಶ: ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ನಂ.02620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ (ಮುಂಬೈ) ದೈನಂದಿನ ರೈಲಿನ ಇಂದಿನ ಪ್ರಯಾಣವನ್ನು ರದ್ದುಪಡಿಸಲಾಗಿದೆ. ಈ ರೈಲಿನಲ್ಲಿ ಮುಂಬೈಗೆ ತೆರಳುವ ಪ್ರಯಾಣಿಕರನ್ನು ಮಂಗಳೂರಿನಿಂದ ರಸ್ತೆ ಮೂಲಕ ಸುರತ್ಕಲ್‌ಗೆ ಕರೆದೊಯ್ದು ಅಲ್ಲಿ ನಂ.01134 ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‌ಎಂಟಿ ವಿಶೇಷ ರೈಲಿನಲ್ಲಿ ಕಳುಹಿಸಿಕೊಡಲಾಗಿದೆ. ಈ ರೈಲಿನ ಜು.17ರ ಸಂಚಾರವನ್ನು ರದ್ದು ಪಡಿಸಲಾಗಿದೆ.
ರೈಲು ನಂ.06586 ಕಾರವಾರ-ಕೆಎಸ್‌ಆರ್ ಬೆಂಗಳೂರು ದೈನಂದಿನ ವಿಶೇಷ ರೈಲಿನ ಜು.16ರ ಸಂಚಾರವನ್ನು ರದ್ದುಪಡಿಸಲಾಗಿದೆ. ಅದೇ ರೀತಿ ಕೆಎಸ್ ಆರ್ ಬೆಂಗಳೂರು - ಕಾರವಾರ ರೈಲಿನ ಜು.16ರ ಸಂಚಾರವನ್ನು ರದ್ದು ಪಡಿಸಲಾಗಿದೆ. ರೈಲು ನಂ.01133 ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ವಿಶೇಷ ರೈಲನ್ನು ಸುರತ್ಕಲ್‌ವರೆಗೆ ಓಡಿಸಿದ್ದು, ಸುರತ್ಕಲ್-ಮಂಗಳೂರು ಜಂಕ್ಷನ್ ನಡುವಿನ ಯಾನವನ್ನು ರದ್ದುಪಡಿಸಲಾಗಿದೆ. ಈ ರೈಲು ನಂ.01134 ಆಗಿ ಸುರತ್ಕಲ್‌ನಿಂದಲೇ ಮುಂಬೈಗೆ ತೆರಳಲಿದೆ.
ನಂ.06071 ದಾದರ್-ತಿರುನಲ್ವೇಲಿ ಸಾಪ್ತಾಹಿಕ ವಿಶೇಷ ರೈಲಿನ ಪ್ರಯಾಣವನ್ನು ಉಡುಪಿ-ತೋಕೂರು ಮದ್ಯೆ ನಾಲ್ಕು ಗಂಟೆ ತಡೆ ಹಿಡಿಯಲಾ ಗಿದೆ. ನಂ.06333 ವಿರಾವಲ್- ತಿರುವನಂತಪುರಂ ಸೆಂಟ್ರಲ್ ಸಾಪ್ತಾಹಿಕ ರೈಲಿನ ಸಂಚಾರವನ್ನು ಕುಮಟಾ ಮತ್ತು ತೋಕೂರು ಮದ್ಯೆ ನಾಲ್ಕು ಗಂಟೆ ಕಾಲ ನಿಯಂತ್ರಿಸಲಾಗಿದೆ.
ರೈಲು ನಂ.02617 ಎರ್ನಾಕುಲಂ ಜಂಕ್ಷನ್- ನಿಝಾಮುದ್ದೀನ್ ದೈನಂದಿನ ರೈಲಿನ ಪ್ರಯಾಣದ ಮಾರ್ಗವನ್ನು ಶೋರನೂರ್ ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಜೋಲಾರ್‌ಪೆಟ್ಟೈ ಜಂಕ್ಷನ್, ರೇನಿಗುಂಟಾ ಜಂಕ್ಷನ್ ಮೂಲಕ ಬದಲಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.







