ದ. ಆಫ್ರಿಕಾದ ಗಲಭೆ ಪೂರ್ವಯೋಜಿತ: ಅಧ್ಯಕ್ಷ ಸಿರಿಲ್ ರಾಮಫೋಸ
ಡರ್ಬನ್,ಜು. 16: ಕಳೆದ ವಾರದಿಂದ ದೇಶವನ್ನು ಕಂಗೆಡಿಸಿದ ಮಾರಣಾಂತಿಕ ಹಿಂಸಾಚಾರ ಹಾಗೂ ಲೂಟಿ, ದಂಗೆಯ ಪ್ರಕರಣ ಪೂರ್ವಯೋಜಿತವಾಗಿದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸ ಆರೋಪಿಸಿದ್ದಾರೆ.
ಪ್ರಚೋದನೆಯಿಂದ ಈ ಗಲಭೆ, ಹಿಂಸಾಚಾರ, ಲೂಟಿ ನಡೆದಿದ್ದು, ಕೆಲವರು ಷಡ್ಯಂತ್ರ ಹೂಡಿ ಇದನ್ನು ಸಂಘಟಿಸಿದ್ದಾರೆ . ಅವರಲ್ಲಿ ಹೆಚ್ಚಿನವರನ್ನು ನಾವು ಗುರುತಿಸಿದ್ದು ಪತ್ತೆ ಕಾರ್ಯಾಚರಣೆ ನಡೆದಿದೆ. ದೇಶದಲ್ಲಿ ಅರಾಜಕತೆ, ಹಾನಿ ಮುಂದುವರಿಯಲು ನಾವು ಬಿಡುವುದಿಲ್ಲ ಎಂದು ಅತ್ಯಂತ ಹೆಚ್ಚು ಹಿಂಸಾಚಾರ ಘಟನೆ ನಡೆದಿರುವ ಡರ್ಬನ್ ನಗರಕ್ಕೆ ನೀಡಿದ ಭೇಟಿ ಸಂದರ್ಭ ಸಿರಿಲ್ ಹೇಳಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಓರ್ವ ಶಂಕಿತನನ್ನು ಬಂಧಿಸಿದ್ದು , 11 ಮಂದಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ಸರಕಾರದ ಮೂಲಗಳು ಗುರುವಾರ ಹೇಳಿವೆ.
ಕನಿಷ್ಟ 2 ಪ್ರಾಂತ್ಯದಲ್ಲಿ ಶಾಪಿಂಗ್ ಮಾಲ್, ರೆಸ್ಟಾರೆಂಟ್ಗಳನ್ನು ಲೂಟಿ ಮಾಡಿ ಧ್ವಂಸಗೊಳಿಸಿರುವುದರಿಂದ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯ ಭೀತಿ ಎದುರಾಗಿದೆ. ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಕನಿಷ್ಟ 117 ಮಂದಿ ಮೃತರಾಗಿದ್ದಾರೆ.
ಭ್ರಷ್ಟಾಚಾರ ಆರೋಪದಲ್ಲಿ ದೇಶದ ಮಾಜಿ ಅಧ್ಯಕ್ಷ ಜಾಕೊಬ್ ಝುಮಾಗೆ 15 ತಿಂಗಳ ಜೈಲುಶಿಕ್ಷೆ ಘೋಷಿಸಿರುವುದನ್ನು ವಿರೋಧಿಸಿ ಆರಂಭವಾದ ಪ್ರತಿಭಟನೆ ಕ್ರಮೇಣ ಹಿಂಸಾಚಾರಕ್ಕೆ ತಿರುಗಿದೆ. ಬೃಹತ್ ಸಂಖ್ಯೆಯಲ್ಲಿದ್ದ ಗಲಭೆಕೋರರು ಸಿಕ್ಕಸಿಕ್ಕ ಅಂಗಡಿ, ವ್ಯಾಪಾರ ಕೇಂದ್ರಗಳನ್ನು ಲೂಟಿ ಮಾಡಿ ಧ್ವಂಸ ಮಾಡಿದ್ದು ಪೊಲೀಸರು ಅಸಹಾಯಕರಾಗಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಬುಧವಾರ ಭದ್ರತಾ ಕಾರ್ಯಕ್ಕೆ ಹೆಚ್ಚುವರಿಯಾಗಿ 25,000 ಪಡೆಯನ್ನು ನಿಯೋಜಿಸಿದೆ. ಗಲಭೆಗ್ರಸ್ತ ಕ್ವಝುಲು-ನಟಲ್ ಪ್ರಾಂತ್ಯಕ್ಕೆ ರಕ್ಷಣೆ, ಭದ್ರತೆ, ಪೊಲೀಸ್ ಇಲಾಖೆಯ ಸಚಿವರು ಹಾಗೂ ಉನ್ನತ ಸೇನಾ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.







