ಭಾರತ ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ್ದು ಜಾಗತಿಕ ಲಸಿಕೆ ಕೊರತೆಗೆ ಕಾರಣ: ಅಮೆರಿಕ ಹೇಳಿಕೆ

ವಾಷಿಂಗ್ಟನ್, ಜು.16: ದೇಶದಲ್ಲಿ ಕೊರೋನ ಸೋಂಕಿನ 2ನೇ ಅಲೆ ಉಲ್ಬಣಗೊಂಡಿದ್ದರಿಂದ ಇತರ ದೇಶಗಳಿಗೆ ಲಸಿಕೆ ಪೂರೈಸುವುದನ್ನು ಭಾರತ ಸ್ಥಗಿತಗೊಳಿಸಿದ್ದು ಇದು ಜಾಗತಿಕ ಮಟ್ಟದಲ್ಲಿ ಲಸಿಕೆಯ ತೀವ್ರ ಕೊರತೆ ಉಂಟಾಗಲು ಕಾರಣವಾಯಿತು ಎಂದು ಅಮೆರಿಕ ಹೇಳಿದೆ.
ಡೆಲ್ಟಾ ಸೋಂಕಿನ ಪ್ರಕರಣ ಹೆಚ್ಚುತ್ತಿರುವಂತೆಯೇ, ಭಾರತದ ಸೆರಮ್ ಸಂಸ್ಥೆ ತಾನು ಪೂರೈಸಬೇಕಿದ್ದ ಹಲವು ಮಿಲಿಯನ್ ಲಸಿಕೆ ಡೋಸ್ಗಳನ್ನು ತಡೆಹಿಡಿಯಿತು. ಇವು ಜಾಗತಿಕ ಲಸಿಕೆ ಹಂಚಿಕೆ ವ್ಯವಸ್ಥೆ ‘ಕೊವ್ಯಾಕ್ಸ್’ಗೆ ಪೂರೈಕೆಯಾಗಬೇಕಿತ್ತು. ಇದು ಜಾಗತಿಕ ಮಟ್ಟದಲ್ಲಿ ಲಸಿಕೆಯ ತೀವ್ರ ಕೊರತೆಗೆ ಕಾರಣವಾಗಿದೆ. ಕೊರೋನ ಸೋಂಕಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಯುರೋಪ್, ಈಗ ಈ ಸಮಸ್ಯೆಯ ಸುಳಿಯಿಂದ ಹೊರಬರುವ ನಿರೀಕ್ಷೆ ಮೂಡಿದೆ ಎಂದು ಯುಎಸ್ಏಯ್ಡೆನ ಆಡಳಿತಾಧಿಕಾರಿ ಸಮಂತಾ ಪಾವರ್ ಅಮೆರಿಕದ ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ.
ಅಮೆರಿಕವು ಪೈಝರ್ ಲಸಿಕೆಯನ್ನು ಖರೀದಿಸಿರುವುದರಿಂದ ಜಾಗತಿಕ ಲಸಿಕೆ ಕೊರತೆ ಸಮಸ್ಯೆ ಶೀಘ್ರ ಅಂತ್ಯವಾಗುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ. ಯುಎಸ್ಏಯ್ಡೆನ ವಾರ್ಷಿಕ ಅನುದಾನದ ಖರ್ಚುವೆಚ್ಚದ ಬಗ್ಗೆ ಅವರು ಸಮಿತಿಗೆ ಮಾಹಿತಿ ನೀಡುತ್ತಿದ್ದರು.
ಕೊವ್ಯಾಕ್ಸ್ ಈಗ ಎದುರಿಸುತ್ತಿರುವ ಪರಿಸ್ಥಿತಿಗೆ, ಭಾರತ ಜಾಗತಿಕ ಲಸಿಕೆ ಪೂರೈಕೆಯಿಂದ ಹಿಂದೆ ಸರಿದಿರುವುದೇ ಕಾರಣ. ಭಾರತದಿಂದ ಲಭಿಸಬೇಕಿದ್ದ ಲಸಿಕೆಯು ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ರೂಪದಲ್ಲಿ ನೀಡಲು ಬಳಕೆಯಾಗಲಿತ್ತು. ಆದರೆ ಇಲ್ಲಿ ಸಮಸ್ಯೆಯಾಗಿದೆ.
ಆಗಸ್ಟ್ನಲ್ಲಿ ಪೈಝರ್ ಲಸಿಕೆ ಆನ್ಲೈನ್ನಲ್ಲಿ ಲಭ್ಯವಾಗುವುದರಿಂದ ಈ ಸಮಸ್ಯೆ ನಿವಾರಣೆಯಾಗುವ ವಿಶ್ವಾಸವಿದೆ. ಹೆಚ್ಚುವರಿ ಲಸಿಕೆ ಹಂಚಿಕೊಳ್ಳುವ ನಮ್ಮ ದ್ವಿಪಕ್ಷೀಯ ಒಪ್ಪಂದದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ದೇಶಗಳಿಗೆ ಲಸಿಕೆ ಪೂರೈಸಿದ್ದೇವೆ. ಆದರೆ ನಾವೊಬ್ಬರೇ ಇಡೀ ವಿಶ್ವಕ್ಕೆ ಲಸಿಕೆ ಪೂರೈಸಲು ಆಗದು, ಆದರೆ ಜಾಗತಿಕ ಮಟ್ಟದಲ್ಲಿ ಲಸಿಕೆಯನ್ನು ಸಂಗ್ರಹಿಸಲು ನಾವು ನೆರವಾಗಬಹುದು ಎಂದು ಸಮಂತಾ ಹೇಳಿದ್ದಾರೆ.







