ನನ್ನದು ಬಡವರ ಪರ ಹೋರಾಟ, ದರ್ಶನ್ ಕ್ಷಮೆಯಾಚಿಸಲಿ: ನಿರ್ದೇಶಕ ಇಂದ್ರಜಿತ್ ಲಂಕೇಶ್
ನಟ ದರ್ಶನ್ ಹಲ್ಲೆ ಪ್ರಕರಣ

ಬೆಂಗಳೂರು, ಜು.16: ನನ್ನದು ಏಕಾಂಗಿ ಹೋರಾಟ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಿನೆಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರಿನ ಖಾಸಗಿ ಹೊಟೇಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿರುವುದು ನಿಜ. ಬಡವರು ಎನ್ನುವ ಕಾರಣಕ್ಕೆ ಅವರಿಗೆ ನ್ಯಾಯ ಕೇಳಲು ಸಾಧ್ಯವಾಗಿಲ್ಲ. ಅವರ ಪರವಾಗಿ ನಾನು ಈ ಹೋರಾಟ ಮುಂದುವರಿಸುತ್ತೇನೆ ಎಂದರು.
ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ಅಲ್ಲದೆ, ಸಮಾಜದ ಹಿತದೃಷ್ಟಿಗಾಗಿ ನಮ್ಮ ಕುಟುಂಬ ಕೆಲಸ ಮಾಡುತ್ತ ಬಂದಿದೆ. ಈ ಪ್ರಕರಣದಲ್ಲಿ ಬಡವರಿಗೆ, ಸಾಮಾನ್ಯರಿಗೆ ಅನ್ಯಾಯವಾಗಿದೆ. ಗಣ್ಯರ ಹಿತಕ್ಕಾಗಿ ನಾನು ಮುಂದೆ ಬಂದಿಲ್ಲ. ಯಾರಿಗೂ ತೇಜೋವಧೆ ಮಾಡುವ ಉದ್ದೇಶ ನನ್ನದಲ್ಲ. ನೋವು ತಿಂದವರಿಗೆ ನ್ಯಾಯ ಒದಗಿಸಿಕೊಡಿ ಎಂದು ಹೇಳಿದರು.
ದಲಿತರು ಎಂದು ನಾನು ಜಾತಿ ಆಧಾರದ ಮೇಲೆ ಹೇಳಿದ್ದು ಅಲ್ಲ. ಬಡವರು ದಲಿತರು, ನಾನು ಆ ಅರ್ಥದಲ್ಲಿ ಹೇಳಿದ್ದೇನೆ ಅಷ್ಟೇ. ದಯವಿಟ್ಟು ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದ ಅವರು, ನಟ ದರ್ಶನ್ ಅವರು ಕ್ಷಮೆಯಾಚನೆ ಮಾಡಲಿ ಎಂದು ಒತ್ತಾಯ ಮಾಡಿದರು.
ರಾಜಕೀಯ ವ್ಯಕ್ತಿಗಳ ಹೆಸರು ಕೇಳಿಬರುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣಕ್ಕೂ ಎಚ್.ಡಿ ಕುಮಾರಸ್ವಾಮಿಗೂ ಹಾಗೂ ಸಿದ್ಧರಾಮಯ್ಯಗೂ ಯಾವುದೇ ಸಂಬಂಧವಿಲ್ಲ. ಕುಮಾರಸ್ವಾಮಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮಾತನಾಡಿದ್ದೇನೆ. ಸಿನಿಮಾ ಮತ್ತು ಬೇರೆ ವಿಚಾರಗಳ ಸಂಬಂಧಪಟ್ಟ ಹಾಗೆ ಮಾತನಾಡಿದ್ದೇವೆ. ಇದರಲ್ಲಿ ಅವರ ಹೆಸರನ್ನು ಎಳೆದು ತರಬೇಡಿ ಎಂದು ತಿಳಿಸಿದರು.







