ದ.ಕ. ಜಿಲ್ಲಾದ್ಯಂತ ಮುಂದುವರಿದ ಮಳೆ : 31 ಮನೆಗಳಿಗೆ ಹಾನಿ

ಮಂಗಳೂರು, ಜು.16: ದ.ಕ. ಜಿಲ್ಲಾದ್ಯಂತ ಶುಕ್ರವಾರವೂ ಉತ್ತಮ ಮಳೆಯಾಗಿದ್ದು, ಹಾನಿಯ ಪ್ರಮಾಣವೂ ಹೆಚ್ಚಾಗಿವೆ. ಗುರುವಾರ ರಾತ್ರಿ ಹಗಲೆನ್ನದೆ ಸುರಿದ ಮಳೆಯಿಂದ ಶುಕ್ರವಾರ ಮತ್ತೆ ಕೆಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿವೆ, ಕಾಂಪೌಂಡ್ ಕುಸಿದಿದೆ, ಗುಡ್ಡ ಜರಿದಿವೆ. ಇದರಿಂದ 4 ಮನೆಗಳು ಸಂಪೂರ್ಣ ಮತ್ತು 27 ಭಾಗಶಃ ಸಹಿತ ಜಿಲ್ಲೆಯಲ್ಲಿ ಶುಕ್ರವಾರ 31 ಮನೆಗಳಿಗೆ ಹಾನಿಯಾಗಿವೆ. ಇದರೊಂದಿಗೆ 2021ರ ಎಪ್ರಿಲ್ 1ರಿಂದ ಈವರೆಗೆ ಭಾಗಶಃ 410 ಮನೆಗಳಿಗೆ ಮತ್ತು 73 ಮನೆಗಳು ಸಂಪೂರ್ಣ ಹಾನಿಯಾಗಿದೆ.
ಶುಕ್ರವಾರ ಮುಂಜಾನೆ ಮತ್ತು ಮಧ್ಯಾಹ್ನ ಉತ್ತಮ ಮಳೆಯಾಗಿತ್ತು. ಉಳಿದಂತೆ ಮಳೆಯು ಬಿಡುವು ಪಡೆದುಕೊಂಡಿತ್ತು. ಆದರೆ ಮೋಡ ಕವಿದ ವಾತಾವರಣವಿತ್ತು. ಪಶ್ಚಿಮ ಘಟ್ಟ ಹಾಗೂ ತಪ್ಪಲು ಪ್ರದೇಶದಲ್ಲಿ ನಿರಂತರ ಮಳೆಯಾದ ಕಾರಣ ಶುಕ್ರವಾರವೂ ಜಿಲ್ಲೆಯ ಫಲ್ಗುಣಿ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದೆ. ನೇತ್ರಾವತಿ ನದಿ ತಟದ ಹಲವು ಕಡೆ ನೆರೆಭೀತಿ ಆವರಿಸಿದೆ.
ಶುಕ್ರವಾರ ಪಂಜಿಮೊಗರಿನ ಲಿಸನ್ ಡಿಸೋಜ ಅವರ ಮನೆಗೆ, ಇಡ್ಯ ಗ್ರಾಮದ ಪುಷ್ಪಾ ಎಂಬವರ ಮನೆಗೆ, ಉಳ್ಳಾಲ ಗ್ರಾಮದ ಉಳ್ಳಾಲ ಹೊಯಿಗೆ ಎಂಬಲ್ಲಿ ಫೆಲಿಕ್ಸ್ ಡಿಸೋಜರ ಮನೆಗೆ ಭಾಗಶಃ ಹಾನಿಯಾಗಿದೆ. ಉಳ್ಳಾಲ ಗ್ರಾಮದ ಉಳಿಯ ಎಂಬಲ್ಲಿ ಶೈನಿ ಡಿಸೋಜರ ಮನೆಗೆ ತೀವ್ರ ಹಾನಿಯಾಗಿದೆ. ಅರ್ಕುಳದ ಕೋಟೆಯ ನೌಶಾದ್ ಎಂಬವರ ಮನೆ ಸಮೀಪದ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಬಡಗ ಎಕ್ಕಾರು ಗ್ರಾಮದ ದೇವರಗುಡ್ಡ ಜರಿದಿದ್ದು, ರಸ್ತೆಗೆ ಹಾನಿಯಾಗಿದೆ. ಇದರಿಂದ ಕೆಲಕಾಲ ಸಂಚಾರಕ್ಕೆ ತೊಡಕುಂಟಾಗಿತ್ತು.
ಮಂಗಳೂರಿನ ಡಿಸಿ ಕಚೇರಿಯ ಸುತ್ತಮುತ್ತ 123.0 ಮಿ.ಮೀ., ಮಂಗಳೂರು ರೈಲ್ವೆ ನಿಲ್ದಾಣದಲ್ಲಿ 122.8 ಮಿ.ಮೀ., ಮುಲ್ಕಿಯಲ್ಲಿ 196.0ಮಿ.ಮೀ., ಉಳ್ಳಾಲದಲ್ಲಿ 128.3 ಮಿ.ಮೀ, ಬಜ್ಪೆಯಲ್ಲಿ 126.8 ಮಿ.ಮೀ., ಪಣಂಬೂರಿನಲ್ಲಿ 150.0 ಮಿ.ಮೀ., ಸುರತ್ಕಲ್‌ನಲ್ಲಿ 158.0 ಮಿ.ಮೀ. ಮಳೆಯಾಗಿದೆ. ಬಂಟ್ವಾಳ ತಾಲೂಕಿನ ಪುದುವಿನಲ್ಲಿ 120.4 ಮಿ.ಮೀ., ಮಾಣಿಯಲ್ಲಿ 145. 4 ಮಿ.ಮೀ. ವಿಟ್ಲದಲ್ಲಿ 103.4 ಮಿ.ಮೀ., ಬೆಳ್ತಂಗಡಿಯ ಐಬಿಯಲ್ಲಿ 103.4 ಮಿ.ಮೀ., ವೇಣೂರಿನಲ್ಲಿ 139.8 ಮಿ.ಮೀ. ಪುತ್ತೂರಿನಲ್ಲಿ 123.6 ಮಿ.ಮೀ., ಸುಳ್ಯದ ಜಾಲ್ಸೂರಿನಲ್ಲಿ 138. 2 ಮಿ.ಮೀ. ಮಳೆಯಾಗಿದೆ.









.jpeg)
_0.jpeg)


