ಕೆ.ಆರ್.ಎಸ್ ಡ್ಯಾಮ್ ಬಿರುಕು ವಿಚಾರ: ಸಂಸದೆ ಸುಮಲತಾ ಹೋರಾಟಕ್ಕೆ ನನ್ನ ಬೆಂಬಲ ಎಂದ ಹೆಚ್.ವಿಶ್ವನಾಥ್

ಮಡಿಕೇರಿ ಜು.16 : ಕೆ.ಆರ್.ಎಸ್ ಅಣೆಕಟ್ಟು ವಿಚಾರದಲ್ಲಿ ಸುಮಲತಾ ಕೈಗೊಂಡಿರುವ ಹೋರಾಟಕ್ಕೆ ತಾನೂ ಕೈ ಜೋಡಿಸಿರುವುದಾಗಿ ಹೇಳಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ರೈತರ ಪರ ಧ್ವನಿಯಾಗಬೇಕೇ ಹೊರತು ವ್ಯಕ್ತಿಗತ ರಾಜಕೀಯ ದ್ವೇಷಾಸೂಯೆ ಸರಿಯಲ್ಲ ಎಂದಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್. ಕೆ.ಆರ್.ಎಸ್. ಕನ್ನಡಿಗರ ಗರ್ವ, ಹೆಮ್ಮೆಯಾಗಿದೆ. ಗಣಿಗಾರಿಕೆಯಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ. ರಾಸಾಯನಿಕ ಹಾಕಿ ಕಲ್ಲು ಬಂಡೆಗಳನ್ನು ಸ್ಪೋಟಿಸುತ್ತಿದ್ದಾರೆ. ಮಂಡ್ಯದ ಸಂಸತ್ ಸದಸ್ಯೆಯಾಗಿ ಸುಮಲತಾ ಅಂಬರೀಷ್ ಗಣಿಗಾರಿಕೆಯಿಂದ ಆಗುತ್ತಿರುವ ಹಾನಿಯ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಿರುವಾಗ ನಾವೆಲ್ಲಾ ಸುಮಲತಾ ಅವರಿಗೆ ಬೆಂಬಲ ನೀಡಬೇಕೇ ವಿನಾ ಗಣಿಗಾರಿಕೆಯನ್ನು ಬೆಂಬಲಿಸುವುದು ಸರಿಯಲ್ಲ ಎಂದರು.
ಕೆ.ಆರ್.ಎಸ್. ವಿಶೇಷವಾದ ವಿಶ್ವಪ್ರಸಿದ್ದ ಅಣೆಕಟ್ಟು. ಇದಕ್ಕೆ ಏನಾದರೂ ಹೆಚ್ಚು ಕಮ್ಮಿಯಾದರೆ ಜಗತ್ತಿನಲ್ಲಿಯೇ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಕೆ.ಆರ್.ಎಸ್. ರಕ್ಷಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಸಚಿವರು ತಾವೇ ಭೂಗರ್ಭ ತಜ್ಞರಂತೆ, ಪರಿಣಿತರಂತೆ ವಾದ ಮಾಡುತ್ತಿರುವುದು ಸರಿಯಲ್ಲ. ತಜ್ಞರ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಬೇಕೆಂದು ಹೇಳಿದ ಎಚ್.ವಿಶ್ವನಾಥ್, ಅಣೆಕಟ್ಟು ರಕ್ಷಣೆಗೆ ಮುಂದಾಗಿರುವ ಸುಮಲತಾ ಧ್ವನಿಯಾಗಿ ನಾನೂ ಕೆ.ಆರ್.ಎಸ್. ರಕ್ಷಣೆ ಪರ ಹೋರಾಟಕ್ಕೆ ಕೈಜೋಡಿಸುವೆ ಎಂದು ಸ್ಪಷ್ಟಪಡಿಸಿದರು.
ತನ್ನ ಗ್ರಾಮವಾದ ಅಡಗೂರು ಕೂಡ ಕೆ.ಆರ್.ಎಸ್. ಅಣೆಕಟ್ಟು ನಿರ್ಮಾಣದ ಸಂದರ್ಭ ಮುಳುಗಡೆಯಾಗಿದೆ. ಸಾವಿರಾರು ರೈತರ ತ್ಯಾಗದ ಇತಿಹಾಸ ಈ ಅಣೆಕಟ್ಟಿನ ನಿರ್ಮಾಣದ ಹಿಂದಿದೆ. ಇದನ್ನು ಯಾರೂ ಮರೆಯಬಾರದು ಎಂದೂ ಅವರು ಹೇಳಿದರು.
ಮೈಸೂರು ಮಹಾರಾಣಿ ಕೂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮಾರಿ ಕೆ.ಆರ್.ಎಸ್ ಅಣೆಕಟ್ಟು ನಿರ್ಮಾಣಕ್ಕೆ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದಾರೆ. ಇಂತಹ ಇತಿಹಾಸದ ಅಣೆಕಟ್ಟಿನ ರಕ್ಷಣೆ ಬೇಡವಾಗಿದೆಯೇ ಎಂದು ತಮ್ಮದೇ ಸರ್ಕಾರಕ್ಕೆ ಛಾಟಿ ಬೀಸಿದರು.
ಮಾಧ್ಯಮಗಳು ದಿನಗಟ್ಟಲೆ ಚಿತ್ರನಟ ದರ್ಶನ್ ವಿಚಾರವನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿಶ್ವನಾಥ್, ಹೆಸರಾಂತ ಕಲಾವಿದ ತೂಗದೀಪ್ ಶ್ರೀನಿವಾಸ್ ಮಗನಾದ ದರ್ಶನ್ ತನ್ನ ಪ್ರತಿಭೆ ಮೂಲಕ ಉತ್ತಮ ಹೆಸರು ಪಡೆದಿದ್ದಾರೆ. ಏನೇ ವಿವಾದಗಳಿದ್ದರೂ ಅವರವರೇ ಕುಳಿತು ಇತ್ಯರ್ಥ ಪಡಿಸಿಕೊಳ್ಳುತ್ತಾರೆ. ಹೀಗಿರುವಾಗ ದಿನಪೂರ್ತಿ ಇದೇ ವಿಚಾರವನ್ನು ಮಾಧ್ಯಮಗಳು ತೋರಿಸುವುದು ಎಷ್ಟು ಸರಿ ಎಂದೂ ವಿಶ್ವನಾಥ್ ಪ್ರಶ್ನಿಸಿದರು.
ಅಣೆಕಟ್ಟು ರಕ್ಷಿಸಬೇಕು
ಕುಮಾರಸ್ವಾಮಿ ಅವರೇ ಕೆ.ಆರ್.ಎಸ್. ವಿಚಾರದಲ್ಲಿ ರಾಜಕೀಯ ಮಾಡಬೇಡಿ. ರೈತರ ಪರವಾಗಿ ದೇವೇಗೌಡರು ಜೆಡಿಎಸ್ ಕಟ್ಟಿದ್ದಾರೆ. ಹೀಗಿರುವಾಗ ರೈತರಿಗಾಗಿ ನಿರ್ಮಿಸಲ್ಪಟ್ಟಿರುವ ಕೆ.ಆರ್.ಎಸ್. ಅಣೆಕಟ್ಟು ರಕ್ಷಣೆಗೆ ಮುಂದಾಗಿ. ವ್ಯಕ್ತಿಗತ ರಾಜಕೀಯ ಶೋಭೆ ತರುವುದಿಲ್ಲ.
- ಹೆ.ಚ್.ವಿಶ್ವನಾಥ್







