ಸಿದ್ದರಾಮಯ್ಯರಿಗೆ ನಳಿನ್ ಸವಾಲು ಹಾಸ್ಯಾಸ್ಪದ: ಹರೀಶ್ ಕುಮಾರ್

ಮಂಗಳೂರು, ಜು.16: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯು ಕೇವಲ ಎರಡು ಸಮುದಾಯಕ್ಕೆ ಮಾತ್ರ ಹೆಚ್ಚಿನ ಒಲವು ತೋರುತ್ತಿದೆ. ಉಳಿದ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಆದಾಗ್ಯೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯರಿಗೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿ ಸವಾಲು ಹಾಕುವುದು ಹಾಸ್ಯಾಸ್ಪದ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯರಿಗೆ ಧಮ್ಮು ಇದ್ದರೆ ಖರ್ಗೆ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಅಂತ ನಳಿನ್ ಸವಾಲು ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಇತಿಹಾಸವನ್ನೊಮ್ಮೆ ಗಮನಹರಿಸಬೇಕು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಲಿಂಗಾಯಿತ, ಒಕ್ಕಲಿಗ, ಕುರುಬ, ಬ್ರಾಹ್ಮಣ, ಈಡಿಗ, ಹಿಂದುಳಿದ ವರ್ಗ, ರಜಪೂತ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಸರ್ವ ಸಮುದಾಯಕ್ಕೂ ನಾಯಕತ್ವ ನೀಡುವ ಮೂಲಕ ನ್ಯಾಯ ನೀಡಿದೆ. ಆದರೆ ಬಿಜೆಪಿಯಲ್ಲಿ ಎರಡು ಸಮುದಾಯದ ಬಗ್ಗೆ ಮಾತ್ರ ಒಲವು ವ್ಯಕ್ತಪಡಿಸಲಾಗುತ್ತಿದೆ. ಸಬ್‌ಕಾ ಸಾಥ್... ಸಬ್ ಕಾ ವಿಕಾಸ್ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಉಳಿದ ಸಮುದಾಯಕ್ಕೆ ಅವಕಾಶ ನೀಡಿದ ಬಗ್ಗೆ ನಳಿನ್ ಸ್ಪಷ್ಟಪಡಿಸಲಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರತಿನಿಧಿಸುವ ಮಂಗಳೂರು ಲೋಕಸಭಾ ಕ್ಷೇತ್ರದ ಕುಲಶೇಖರದಲ್ಲಿ ರೈಲ್ವೆ ತಡೆಗೋಡೆ ಕುಸಿದು ರೈಲ್ವೆ ಸಂಚಾರವೇ ರದ್ದುಗೊಂಡಿದೆ. ಈ ಪ್ರದೇಶದ ವೀರನಾರಾಯಣ, ಕೊಂಗೂರು ಮಠ ರಸ್ತೆಗೂ ಹಾನಿಯಾಗಿದೆ. ಕಳಪೆ, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದೇ ತಡೆಗೋಡೆ ಕುಸಿತಕ್ಕೆ ಕಾರಣವಾಗಿದೆ. ಪಚ್ಚನಾಡಿ ರೈಲ್ವೆ ಮೇಲ್ಸೇತುವೆ ನಿಧಾನಗತಿಯಲ್ಲಿ ಸಾಗುತ್ತಿದೆ. ಪಂಪ್‌ವೆಲ್ ಸರ್ವಿಸ್ ರಸ್ತೆ ಅವೈಜ್ಞಾನಿಕವಾಗಿ ನೀರು ತುಂಬುತ್ತಿದೆ. ಸಂಸದರು ಇಂತಹ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ತಜ್ಞರಿಂದ ವರದಿ ತರಿಸಿ ಕಳಪೆ ಕಾಮಗಾರಿಯ ವಿರುದ್ಧ ಕ್ರಮಕೈಗೊಳ್ಳುವ ಬದಲು ಇಂತಹ ರಾಜಕೀಯ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಹರೀಶ್ ಕುಮಾರ್ ಹೇಳಿದರು.
ಮಳೆಗಾಲದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ‘ಫ್ಲಡ್ ಸಿಟಿ’ಯಾಗಿದೆ. ಮರವೂರು ಸೇತುವೆ ದುರಸ್ತಿ ಪೂರ್ಣಗೊಳ್ಳದೆ ಆ ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ. ದೇಶದಲ್ಲಿ 140 ಕೋಟಿ ಜನರಿದ್ದು, 2.78 ಕೋಟಿ ಜನ (ಶೇ.5.7) ಎರಡು ಡೋಸ್, 14 ಕೋಟಿ ಜನ (ಶೇ.10) ಎರಡನೇ ಡೋಸ್ ಪಡೆದಿದ್ದಾರೆ. ಇನ್ನೂ ಶೇ.90ಮಂದಿ ಲಸಿಕೆ ಪಡೆಯಲು ಬಾಕಿಯಿದೆ. ಇದೇ ರೀತಿ ಮುಂದುವರಿದರೆ ಮೂರನೇ ಅಲೆ ಎದುರಿ ಸಲು ಸಾಧ್ಯವಿಲ್ಲ. ಎಲ್ಲರಿಗೂ ಉಚಿತ-ಎಲ್ಲರಿಗೂ ಲಸಿಕೆ ಎಂದು ಹೇಳಿದ ಕೇಂದ್ರ ಸರಕಾರವು ಸಮರ್ಪಕವಾಗಿ ಲಸಿಕೆ ವಿತರಣೆ ಮಾಡುತ್ತಿಲ್ಲ ಎಂದು ಹರೀಶ್ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಸುಭೋದಯ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಗಣೇಶ್ ಪೂಜಾರಿ, ಸುರೇಶ್ ಕೋಟ್ಯಾನ್, ನಝೀರ್ ಬಜಾಲ್, ಅಭಿಷೇಕ್ ಉಳ್ಳಾಲ್ ಉಪಸ್ಥಿತರಿದ್ದರು.







