ಗಾಂಜಾ ಸೇವನೆ: 10 ಆರೋಪಿಗಳ ಬಂಧನ
ಮಂಗಳೂರು, ಜು.16: ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಪ್ರಶಾಂತ್ ಕುಮಾರ್, ಅಜ್ಮಲ್, ಅಬ್ದುಲ್ ಸಮದ್, ಲಿಖಿತ್, ಸುರೇಶ್, ನಾಗರಾಜ್, ದೇವಿಪ್ರಸಾದ್, ಹೀಮ್ ಖಾನ್, ಫಹಾದ್ ನಝೀರ್, ರಾಶೀದ್ ಬಂಧಿತ ಆರೋಪಿಗಳು.
ಕದ್ರಿ ಪೊಲೀಸರು ಗಸ್ತಿನಲ್ಲಿದ್ದಾಗ ಪ್ರಶಾಂತ್ ಕುಮಾರ್ ಎಂಬಾತನು ಕುದ್ರೋಳಿ ಅಳಕೆ ಬ್ರಿಡ್ಜ್‌ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಆತನ ಬಳಿ ಹೋಗಿ ವಿಚಾರಿಸಿದಾಗ ಆತ ಅಮಲು ಪದಾರ್ಥ ಸೇವಿಸುತ್ತಿರುವುದು ತಿಳಿದು ಬಂದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಕನಾಡಿ ನಗರ ಪೊಲೀಸರು ಗಸ್ತಿನಲ್ಲಿದ್ದಾಗ ಅಜ್ಮಲ್ ಎಂಬಾತನನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿತ್ತು. ಆತನನ್ನು ಕೂಲಂಕಷವಾಗಿ ವಿಚಾರಣೆಗೆ ನಡೆಸಿದಾಗ ಆತನು ತಾನು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ತಪಾಸಣೆಯಲ್ಲೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಪಣಂಬೂರು ಠಾಣಾ ಪೊಲೀಸರು ಗಸ್ತಿನಲ್ಲಿದ್ದಾಗ ಆರೋಪಿ ಅಬ್ದುಲ್ ಸಮದ್ ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಮಾದಕ ಸೇವಿಸಿರುವುದು ದೃಢಪಟ್ಟಿದೆ. ಕಾವೂರು ಪೊಲೀಸರು ಗಸ್ತಿನಲ್ಲಿದ್ದಾಗ ಲಿಖಿತ್, ಸುರೇಶ್, ನಾಗೇಶ್, ದೇವಿಪ್ರಸಾದ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ತಿಳಿದು ಬಂದಿದೆ. ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಾಂತ್ಯ ಗ್ರಾಮದ ಪ್ರಾಂತ್ಯ ಶಾಲಾ ಮೈದಾನ ಸುತ್ತಮುತ್ತ ಗಸ್ತಿನಲ್ಲಿದ್ದಾಗ ಹೀಮ್, ಪಹಾದ್, ರಶೀದ್ ಎಂಬವರು ಮಾದಕ ವಸ್ತು ಸೇವನೆ ಮಾಡಿರುವುದು ತಿಳಿದು ಬಂದಿದೆ. ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಗಾಂಜಾ ಸೇವನೆ ಮಾಡಿದ 10 ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







