ಪಾಕ್-ಅಫ್ಘಾನ್ ಗಡಿದಾಟು: ಸೈನಿಕರು, ತಾಲಿಬಾನ್ ನಡುವೆ ಭೀಕರ ಕಾಳಗ
ಕಂದಹಾರ್ (ಅಫ್ಘಾನಿಸ್ತಾನ), ಜು. 16: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಸ್ಪಿನ್ ಬೋಲ್ಡಕ್ ಗಡಿದಾಟು ಸಮೀಪ ಶುಕ್ರವಾರ ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ಉಗ್ರರ ನಡುವೆ ಹೋರಾಟ ನಡೆದಿದೆ. ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದ ಗಡಿದಾಟನ್ನು ಮರುವಶಪಡಿಸಿಕೊಳ್ಳಲು ಅಫ್ಘಾನ್ ಪಡೆಗಳು ಬಂದಾಗ ಸಂಘರ್ಷ ಸಂಭವಿಸಿದೆ.
ಶುಕ್ರವಾರ ರಾತ್ರಿಯಿಡೀ ಭೀಕರ ಕಾಳಗ ನಡೆದಿದ್ದು, ಗಡಿ ಸಮೀಪದಲ್ಲಿರುವ ಪಾಕಿಸ್ತಾನದ ಆಸ್ಪತ್ರೆಯೊಂದರಲ್ಲಿ ಗಾಯಗೊಂಡಿರುವ ಹಲವಾರು ತಾಲಿಬಾನಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳದಲ್ಲಿರುವ ಎಎಫ್ಪಿ ವರದಿಗಾರರು ವರದಿ ಮಾಡಿದ್ದಾರೆ.
‘‘ನಮ್ಮಲ್ಲಿ ಒಂದು ಸಾವಾಗಿದೆ ಹಾಗೂ ಡಝನ್ ಗಟ್ಟಲೆ ಹೋರಾಟಗಾರರು ಗಾಯಗೊಂಡಿದ್ದಾರೆ’’ ಎಂದು ತಾಲಿಬಾನ್ ಬಂಡುಕೋರ ಎಂಬುದಾಗಿ ತನ್ನನ್ನು ಗುರುತಿಸಿಕೊಂಡ ಮುಲ್ಲಾ ಮುಹಮ್ಮದ್ ಹಸನ್ ಎಎಫ್ಪಿಗೆ ತಿಳಿಸಿದ್ದಾನೆ.
ಈ ವಲಯದಲ್ಲಿ ತಾಲಿಬಾನ್ ವಿರೋಧಿ ಪಾಳೆಯಗಾರ ಅಬ್ದುಲ್ ರಶೀದ್ ದೋಸ್ತಮ್ ಪ್ರಬಲವಾಗಿದ್ದು, ತಾಲಿಬಾನ್ ಅಲ್ಲಿಗೂ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. ಜೊವ್ಝನ್ ಪ್ರಾಂತದ ರಾಜಧಾನಿ ಶೆಬರ್ರ್ಘನ್ನಿಂದ ದೋಸ್ತಮ್ ನಿಷ್ಠ ಪಡೆಗಳು ಪಲಾಯನಗೈದಿವೆ ಎಂದು ತಾಲಿಬಾನ್ ವಕ್ತಾರನೊಬ್ಬ ಹೇಳಿದ್ದಾನೆ.
ಪಾಕ್ ನಿಂದ ತಾಲಿಬಾನ್ ಗೆ ಬೆಂಬಲ: ಅಫ್ಘಾನ್ ಉಪಾಧ್ಯಕ್ಷ ಆರೋಪ
ಪಾಕಿಸ್ತಾನದ ಸೇನೆಯು ಕೆಲವು ಪ್ರದೇಶಗಳಲ್ಲಿ ತಾಲಿಬಾನ್ಗೆ ವಾಯು ಬೆಂಬಲ ನೀಡುತ್ತಿದೆ ಎಂದು ಅಪ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಾಲಿಹ್ ಆರೋಪಿಸಿದ್ದಾರೆ.
ಈ ಆರೋಪವನ್ನು ಪಾಕಸಿತಾನ ಬನಲವಾಗಿ ನಿರಾಕರಿಸಿದೆ. ‘‘ನಮ್ಮ ಸೈನಿಕರು ಮತ್ತು ಜನರ ರಕ್ಷಣೆಗಾಗಿ ನಮ್ಮದೇ ಭೂಭಾಗದಲ್ಲಿ ನಮ್ಮ ದೇಶವು ಕ್ರಮ ತೆಗೆದುಕೊಂಡಿದೆ’’ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.







