ಕೋವಿಶೀಲ್ಡ್ ಅನುಮೋದನೆಗೆ ಇದುವರೆಗೆ ಅರ್ಜಿ ಸಲ್ಲಿಕೆಯಾಗಿಲ್ಲ: ಇಎಂಎ

ಹೊಸದಿಲ್ಲಿ, ಜು.16: ಕೋವಿಶೀಲ್ಡ್ ಲಸಿಕೆಯನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ(ಇಎಂಎ) ಅನುಮೋದಿಸಿದರೆ ಲಸಿಕೆಯ ಎರಡೂ ಡೋಸ್ ಪಡೆದ ಭಾರತೀಯರು ಯಾವುದೇ ನಿಷೇಧದ ಭಯವಿಲ್ಲದೆ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ. ಆದರೆ ಕೋವಿಶೀಲ್ಡ್ ಲಸಿಕೆಯ ಮೌಲ್ಯಮಾಪನ ಹಾಗೂ ಮಾರುಕಟ್ಟೆ ದೃಢೀಕರಣದ ಬಗ್ಗೆ ಅಧಿಕೃತ ಕೋರಿಕೆ ಬಂದಿಲ್ಲ ಎಂದು ಯುರೋಪ್ನ ಆರೋಗ್ಯ ನಿಯಂತ್ರಣ ಸಂಸ್ಥೆ ಶುಕ್ರವಾರ ಹೇಳಿದೆ.
ಯುರೋಪಿಯನ್ ಯೂನಿಯನ್ನಲ್ಲಿ ಬಳಸಬೇಕಾದರೆ ಕೋವಿಶೀಲ್ಡ್ ಲಸಿಕೆಯ ಮೌಲ್ಯಮಾಪನದ ಅಗತ್ಯವಿದೆ. ಲಸಿಕೆ ಉತ್ಪಾದಕರು ಅಧಿಕೃತ ಮಾರುಕಟ್ಟೆ ದೃಢೀಕರಣ ಅರ್ಜಿಯನ್ನು ಇಎಂಎಗೆ ಸಲ್ಲಿಸಬೇಕು. ಆದರೆ ಇದುವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಇಎಂಎಯ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಯುರೋಪ್ನಲ್ಲಿ ಜುಲೈ 1ರಿಂದ ಹೊಸ ಲಸಿಕೆ ಪಾಸ್ಪೋರ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಇಎಂಎ ಅನುಮೋದಿಸಿದ , ಕೋವಿಡ್-19 ಸೋಂಕಿನ ವಿರುದ್ಧದ ಕೆಲವು ಲಸಿಕೆಗಳನ್ನು ಪಡೆದವರು ಕನಿಷ್ಟ ನಿರ್ಭಂಧಗಳೊಂದಿಗೆ ಯುರೋಪ್ಗೆ ಅಥವಾ ಅಲ್ಲಿಂದ ಬೇರೆಡೆ ಪ್ರಯಾಣಿಸಬಹುದಾಗಿದೆ. ಇದುವರೆಗೆ ಕಾಮಿರ್ನಟಿ(ಫೈಝರ್/ಬಯೋಂಟೆಕ್), ಮೊಡೆರ್ನಾ, ವ್ಯಾಕ್ಸ್ಝೆವ್ರಿಯಾ(ಆಸ್ಟ್ರಝೆನೆಕ) ಮತ್ತು ಜಾನ್ಸನ್(ಜಾನ್ಸನ್ ಆ್ಯಂಡ್ ಜಾನ್ಸನ್) ಲಸಿಕೆಗೆ ಇಎಂಎ ಅನುಮೋದನೆ ನೀಡಿದೆ.
ಕ್ಯೂರ್ವ್ಯಾಕ್(ಸಿವಿಎನ್ಸಿಒವಿ), ನೊವಾವ್ಯಾಕ್ಸ್(ಎನ್ವಿಎಕ್ಸ್), ಸ್ಪುಟ್ನಿಕ್ ಮತ್ತು ಸಿನೊಫಾರ್ಮ್ ಲಸಿಕೆಗಳು ಮೌಲ್ಯಮಾಪನ ಹಂತದಲ್ಲಿವೆ. ಅಸ್ಟ್ರಾಝೆನೆಕ-ಆಕ್ಸ್ಫರ್ಡ್ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ತಯಾರಿಸುತ್ತಿರುವ ಸೆರಂ ಸಂಸ್ಥೆ, ತಾನು ಅನುಮೋದನೆಗಾಗಿ ತನ್ನ ಪಾಲುದಾರ ಸಂಸ್ಥೆ ಅಸ್ಟ್ರಝೆನೆಕ ಮೂಲಕ ಅರ್ಜಿ ಸಲ್ಲಿಸಿದ್ದು ಒಂದು ತಿಂಗಳೊಳಗೆ ಅನುಮೋದನೆ ಲಭಿಸಲಿದೆ ಎಂದಿದೆ. ಇದರಲ್ಲಿ ಯಾವುದೇ ವಿವಾದವಿಲ್ಲ. ಒಂದು ತಿಂಗಳೊಳಗೆ ಕೋವಿಶೀಲ್ಡ್ ಗೆ ಅನುಮೋದನೆ ಲಭ್ಯವಾಗುವ ವಿಶ್ವಾಸವಿದೆ ಎಂದು ಸೆರಂ ಸಂಸ್ಥೆಯ ಸಿಇಒ ಆದರ್ ಪೂನಾವಾಲಾ ಹೇಳಿದ್ದಾರೆ.







