ದಾನಿಶ್ ಸಿದ್ದೀಕಿ ಹತ್ಯೆಯಲ್ಲಿ ಕೈವಾಡ ಇಲ್ಲ : ತಾಲಿಬಾನ್

Photo: Economic times
ಕಂದಹಾರ್: ಪುಲಿಟ್ಜರ್ ಪ್ರಶಸ್ತಿ ಪುತಸ್ಕೃತ ಛಾಯಾಗ್ರಾಹಕ, ಭಾರತದ ದಾನಿಶ್ ಸಿದ್ದೀಕಿ ಅವರ ಹತ್ಯೆ ಹೇಗೆ ನಡೆಯಿತು ಎನ್ನುವುದು ತನಗಿನ್ನೂ ತಿಳಿದಿಲ್ಲ ಎಂದು ತಾಲಿಬಾನ್ ಸ್ಪಷ್ಟನೆ ನೀಡಿದೆ.
ದಾನಿಶ್ ಸಿದ್ದೀಕಿ ನಿಧನಕ್ಕೆ ತಾಲಿಬಾನ್ ಶೋಕ ವ್ಯಕ್ತಪಡಿಸಿದೆ. ಕಂದಹಾರ್ ನಲ್ಲಿ ತಾಲಿಬಾನ್ ಕಾರ್ಯಕರ್ತರು ಹಾಗೂ ಅಫ್ಘಾನ್ ಪಡೆಗಳ ನಡುವಿನ ಘರ್ಷಣೆ ವೇಳೆ ಸಿದ್ದಿಕಿ ಬಲಿಯಾಗಿದ್ದರು.
"ಯಾರು ಹೊಡೆದ ಗುಂಡಿನಿಂದ ಪತ್ರಕರ್ತ ಹತ್ಯೆಯಾಗಿದ್ದಾರೆ ಎನ್ನುವುದು ನಮಗಿನ್ನೂ ತಿಳಿದಿಲ್ಲ. ಆತ ಹೇಗೆ ಮೃತಪಟ್ಟರು ಎನ್ನುವುದೂ ನಮಗೆ ತಿಳಿಯದು" ಎಂದು ತಾಲಿಬಾನ್ ವಕ್ತಾರ ಜುಬೈದುಲ್ಲಾ ಮುಜಾಹೀದ್ ನೀಡಿರುವ ಪ್ರಕಟನೆಯನ್ನು ಉಲ್ಲೇಖಿಸಿ hindustan times ವರದಿ ಮಾಡಿದೆ.
"ಯುದ್ಧಕ್ಷೇತ್ರ ಪ್ರವೇಶಿಸುವ ಯಾವ ಪತ್ರಕರ್ತರಾದರೂ ನಮಗೆ ಮಾಹಿತಿ ನೀಡಬೇಕು. ಆ ವ್ಯಕ್ತಿಯ ಬಗ್ಗೆ ನಾವು ಸೂಕ್ತ ಕಾಳಜಿ ವಹಿಸುತ್ತೇವೆ" ಎಂದು ಮುಜಾಹೀದ್ ಹೇಳಿದ್ದಾಗಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.
"ಭಾರತೀಯ ಛಾಯಾಗ್ರಾಹಕ ದಾನಿಶ್ ಸಿದ್ದೀಕಿ ಸಾವಿಗೆ ನಮ್ಮ ಸಂತಾಪವಿದೆ. ನಮಗೆ ಮಾಹಿತಿ ನೀಡದೇ ಯುದ್ಧವಲಯಕ್ಕೆ ಪತ್ರಕರ್ತರು ಪ್ರವೇಶಿಸುತ್ತಿರುವ ಬಗ್ಗೆ ವಿಷಾದವಿದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಯಟರ್ಸ್ ಛಾಯಾಗ್ರಾಹಕರಾಗಿದ್ದ 38 ವರ್ಷ ವಯಸ್ಸಿನ ಸಿದ್ದೀಕಿ, ಶುಕ್ರವಾರ ಸಂಜೆ ಅಪ್ಘಾನ್ ಭಧ್ರತಾ ಪಡೆಗಳು ಮತ್ತು ತಾಲಿಬಾನ್ ನಡುವೆ ಪಾಕಿಸ್ತಾನದ ಗಡಿಯಲ್ಲಿ ನಡೆದ ಘರ್ಷಣೆ ವೇಳೆ ಗುಂಡಿಗೆ ಬಲಿಯಾಗಿದ್ದರು.







