"ಜಾತ್ಯತೀತ ಪಠ್ಯಗಳನ್ನು ಕೈಬಿಟ್ಟ ಬಿಜೆಪಿಯಿಂದ ಶಿಕ್ಷಣದ ಕೇಸರೀಕರಣ": ಬಂಗಾಳ ಶಿಕ್ಷಣ ಸಚಿವರ ಆಕ್ಷೇಪ

ಕೊಲ್ಕತ್ತಾ: ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಶಾಲಾ ಪಠ್ಯಗಳಿಂದ ಜಾತ್ಯತೀತತೆಯ ಕುರಿತಾದ ಪಠ್ಯಗಳನ್ನು ಕೈಬಿಟ್ಟು ಬಿಜೆಪಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬೃತ್ಯ ಬಸು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸರಕಾರವು ಶಾಲಾ ಪಠ್ಯದಿಂದ ರವೀಂದ್ರನಾಥ್ ಠಾಗೋರ್ ಅವರ ಕಥೆಯೊಂದನ್ನು ಪಠ್ಯದಿಂದ ಕೈಬಿಟ್ಟಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಸು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
"ಅವರು ಠಾಗೋರ್ ಅವರು ಬರೆದಿರುವ ಕಥೆಯನ್ನು ಪಠ್ಯದಿಂದ ಹೊರಗಿಡಬಹುದಾದರೆ ಇದು ಅವರ ಆಕ್ರಮಣಕಾರಿ ಮನೋವೃತ್ತಿಯನ್ನು ಸೂಚಿಸುತ್ತದೆ. ಠಾಗೋರ್ ಅವರ ಬರಹಗಳಲ್ಲಿ ಗಮನಿಸಿದಂತೆ ಅವರೊಬ್ಬ ಜಾತ್ಯತೀತ ವ್ಯಕ್ತಿತ್ವ. ಸಹಜವಾಗಿ ಬಿಜೆಪಿಗೆ ಇಂತಹ ಸಿದ್ಧಾಂತಗಳು ಖುಷಿ ನೀಡುವುದಿಲ್ಲ. ಇದೇ ಕಾರಣಕ್ಕೆ ಅವರು ಠಾಗೋರ್, ಡಾ ರಾಧಾಕೃಷ್ಣನ್ ಕುರಿತಾದ ವಿಷಯಗಳನ್ನು ಶಾಲಾ ಪಠ್ಯಗಳಿಂದ ಹೊರಗಿಡುತ್ತಿದ್ದಾರೆ,'' ಎಂದು ಬಸು ಹೇಳಿದರು.
ಉತ್ತರ ಪ್ರದೇಶದಲ್ಲಿ ಎನ್‍ಸಿಇಆರ್‍ಟಿ ಪಠ್ಯ ಇಂಗ್ಲಿಷ್‍ಗೆ ಜಾರಿಗೊಳಿಸಲಾಗುತ್ತಿರುವುದರಿಂದ 10ನೇ ಮತ್ತು 12ನೇ ತರಗತಿಗಳ ಪಠ್ಯದಿಂದ ಠಾಗೋರ್ ಮತ್ತು ಎಸ್ ರಾಧಾಕೃಷ್ಣನ್ ಅವರ ಕಥೆಗಳನ್ನು ಉತ್ತರ ಪ್ರದೇಶ ಶಿಕ್ಷಣ ಮಂಡಳಿ ಕೈಬಿಟ್ಟಿತ್ತೆಂದು ಈ ಹಿಂದೆ ವರದಿಯಾಗಿದೆ.
ಠಾಗೋರ್ ಅವರ ಸಣ್ಣ ಕಥೆ `ದಿ ಹೋಮ್ ಕಮಿಂಗ್' ಹಾಗೂ ರಾಧಾಕೃಷ್ಣನ್ ಅವರ ಪ್ರಬಂಧ ʼದಿ ವಿಮೆನ್ಸ್ ಎಜುಕೇಶನ್' 12ನೇ ತರಗತಿಯ ಪಠ್ಯದ ಭಾಗವಾಗಿದ್ದವು. ಜತೆಗೆ ಸರೋಜಿನಿ ನಾಯ್ಡು ಅವರ ಕವನ ʼದಿ ವಿಲೇಜ್ ಸಾಂಗ್' ಮುಲ್ಕ್ ರಾಜ್ ಆನಂದ್ ಅವರ ʼದಿ ಲಾಸ್ಟ್ ಚೈಲ್ಡ್' ಮತ್ತು ಆರ್ ಕೆ ನಾರಾಯಣ್ ಅವರ `ಆ್ಯನ್ ಎಸ್ಟ್ರಾಲಜರ್ಸ್ ಡೇ' ಹಾಗೂ ಎ ಎಲ್ ಬಾಷಮ್ ಅವರ ʼದಿ ಹೆರಿಟೇಜ್ ಆಫ್ ಇಂಡಿಯಾ' ಕೂಡ ಕೈಬಿಡಲಾಗಿದೆ. ಸಿ ರಾಜಗೋಪಾಲಾಚಾರಿ, ಜಾನ್ ಮಿಲ್ಟನ್ ಮತ್ತು ಪಿ ಬಿ ಶೆಲ್ಲಿ ಅವರು ಬರೆದ ಪ್ರಬಂಧ, ಕವನಗಳನ್ನೂ ಕೈಬಿಡಲಾಗಿದೆ.







