ಗಡಿ ಪ್ರದೇಶಗಳಲ್ಲಿ ಕೋವಿಡ್ ತಪಾಸಣೆ: ಪೊಲೀಸ್ ಕಮಿಷನರ್
ಮಂಗಳೂರು, ಜು.17: ಕೇರಳದಲ್ಲಿ ಕೊರೋನ ಸೋಂಕಿನ ಪ್ರಮಾಣ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ಸೂಚನೆ ಮೇರೆಗೆ ಗಡಿ ಭಾಗಗಳಲ್ಲಿ ಸಂಚರಿಸುವವರ ಮೇಲೆ ತಪಾಸಣೆ ಮುಂದುವರಿಸಲಾಗಿದೆ. ತಲಪಾಡಿ ಸಹಿತ 7 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾ ಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಕರ್ನಾಟಕದ ಗಡಿ ಭಾಗಗಳಲ್ಲಿ ಈಗಾಗಲೇ ಪೊಲೀಸ್ ಚೆಕ್‌ಪೋಸ್ಟ್ ಹಾಕಲಾಗಿದೆ. ಎಸ್ಸೈ ದರ್ಜೆಯ ಅಧಿಕಾರಿ ಹಾಗೂ ಸಿಬ್ಬಂದಿ ಜತೆಗೆ ಆರೋಗ್ಯ ಕಾರ್ಯಕರ್ತರೂ ಅಲ್ಲಿ ಕರ್ತವ್ಯದಲ್ಲಿದ್ದಾರೆ. ಮಂಜೇಶ್ವರ, ಉಪ್ಪಳ, ಕಾಸಗೋಡು ಕಡೆಯಿಂದ ಪ್ರತೀ ದಿನ ಮಂಗಳೂರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ ಸಹಿತ ಅನೇಕ ಸೇವೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬರನ್ನು ತಪಾಸಣೆ ನಡೆಸಿದ ಬಳಿಕವೇ ಮುಂದುವರಿಯಲು ಬಿಡಲಾಗುತ್ತಿದೆ. ಪ್ರಯಾಣಿಕರ ಬಳಿ ಮೊದಲ ಹಂತದ ಲಸಿಕೆ ಪಡೆದ ಅಥವಾ ಕೊರೋನ ನೆಗೆಟಿವ್ ದಾಖಲಾತಿ ಕಡ್ಡಾಯವಾಗಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಸ್ಥಳದಲ್ಲೇ ಆರ್‌ಟಿಪಿಸಿಆರ್, ರ್ಯಾಪಿಡ್ ತಪಾಸಣೆ ನಡೆಸಲಾಗುತ್ತದೆ. ಸಾರ್ವಜನಿಕರು ಕೊರೋನ ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಮೂರನೇ ಅಲೆಯನ್ನು ತಡೆಯಲು ಸಹಕರಿಸಬೇಕು ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ.





