ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ’ ಎಂದು ಹೆಸರಿಸುವಂತೆ 30ಕ್ಕೂ ಅಧಿಕ ಸಾಮಾಜಿಕ ಸಂಘಟನೆಗಳಿಂದ ಅಮೆರಿಕಕ್ಕೆ ಆಗ್ರಹ

ಹೊಸದಿಲ್ಲಿ, ಜು.17: ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ (ಸಿಪಿಸಿ)’ ಎಂದು ಹೆಸರಿಸುವಂತೆ ಮತ್ತು ಧಾರ್ಮಿಕ ತಾರತಮ್ಯ ಹಾಗೂ ಹಿಂದುಯೇತರರಿಗೆ ರಾಜಾರೋಷ ಕಿರುಕುಳವನ್ನು ಉತ್ತೇಜಿಸುವ ಅಧಿಕಾರಿಗಳು ಮತ್ತು ಇತರರ ಮೇಲೆ ಪ್ರತಿಬಂಧ ಹೇರುವಂತೆ ಅಮೆರಿಕದ ವಿದೇಶಾಂಗ ಇಲಾಖೆಯನ್ನು ಆಗ್ರಹಿಸುವ ಜಂಟಿ ನಿರ್ಣಯವನ್ನು ವಿಶ್ವಾದ್ಯಂತದ 30ಕ್ಕೂ ಅಧಿಕ ನಾಗರಿಕ ಸಮಾಜ ಸಂಘಟನೆಗಳು ಹೊರಡಿಸಿವೆ ಎಂದು telegraphindia.com ವರದಿ ಮಾಡಿದೆ.
ಗುರುವಾರ ಅಮೆರಿಕದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಶೃಂಗದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಭಾರತದಲ್ಲಿಯ ತಾರತಮ್ಯದ ಮೇಲೆ ನಿಗಾಯಿರಿಸಿದರೆ ಅಲ್ಲಿಯ ಸರಕಾರದ ಟೀಕೆಯನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದ ಜೋ ಬೈಡನ್ ಆಡಳಿತದ ನಿರಾಸಕ್ತಿಯ ಬಗ್ಗೆ ಶೃಂಗದಲ್ಲಿ ಭಾಗವಹಿಸಿದ್ದ ವಿವಿಧ ಧರ್ಮಗಳ ನಾಯಕರು ನಿರಾಶೆಯನ್ನು ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಯಾವುದೇ ದೇಶದಲ್ಲಿ ನಿರ್ದಿಷ್ಟವಾಗಿ ಧಾರ್ಮಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಗಳು ನಡೆಯುತ್ತಿದ್ದಲ್ಲಿ ಅಂತಹ ದೇಶವು ಅಮೆರಿಕದ ಅಧ್ಯಕ್ಷರಿಂದ ನಿಯೋಜಿತ ಅಧಿಕಾರವನ್ನು ಹೊಂದಿರುವ ವಿದೇಶಾಂಗ ಸಚಿವರಿಂದ ಸಿಪಿಸಿ ವರ್ಗಕ್ಕೆ ಸೇರಿಸಲ್ಪಡುತ್ತದೆ.
ವಿದೇಶಾಂಗ ಸಚಿವರು ಯಾವುದೇ ದೇಶವನ್ನು ‘ನಿರ್ದಿಷ್ಟ ಕಳವಳದ ದೇಶ’ ಎಂದು ಗುರುತಿಸಿದರೆ ಅಮೆರಿಕ ಸಂಸತ್ತಿಗೆ ಈ ಮಾಹಿತಿಯನ್ನು ನೀಡಲಾಗುತ್ತದೆ. ಬಳಿಕ ಸಂಸತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಆ ದೇಶದ ಮೇಲೆ ಆರ್ಥಿಕ ಮತ್ತು ಆರ್ಥಿಕೇತರ ಪ್ರತಿಬಂಧಗಳ ಮೂಲಕ ಒತ್ತಡವನ್ನು ಹೇರುತ್ತದೆ.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಗಳ ಕುರಿತ ಅಮೆರಿಕ ಆಯೋಗವು ಕಳೆದ ವರ್ಷ ತನ್ನ ವರದಿಯಲ್ಲಿ ಭಾರತವನ್ನು ಸಿಪಿಸಿ ಪಟ್ಟಿಯಲ್ಲಿ ಸೇರಿಸುವಂತೆ ವಿದೇಶಾಂಗ ಇಲಾಖೆಗೆ ಶಿಫಾರಸು ಮಾಡಿತ್ತು ಮತ್ತು ಇದರಿಂದ ಭಾರತವು ಸೌದಿ ಅರೇಬಿಯಾ, ಚೀನಾ, ಪಾಕಿಸ್ತಾನ, ಇರಾನ್ ಮತ್ತು ಇಂತಹ ಇತರ ದೇಶಗಳ ಗುಂಪಿಗೆ ಸೇರುತ್ತಿತ್ತು. ಆದರೆ ಆಯೋಗದ ಶಿಫಾರಸನ್ನು ವಿದೇಶಾಂಗ ಇಲಾಖೆಯು ತಿರಸ್ಕರಿಸಿತ್ತು ಎಂದು ವರದಿಯಾಗಿದೆ.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಶೃಂಗಸಭೆಯಲ್ಲಿ ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ: ಸವಾಲುಗಳು ಮತ್ತು ಅವಕಾಶಗಳು’ ಕುರಿತು ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ಸಂಸದರಾದ ಎಡ್.ಮಾರ್ಕ್‌ಲಿ, ಮೇರಿ ನ್ಯೂಮನ್ ಮತ್ತು ಆ್ಯಂಡಿ ಲೆವಿನ್ ಅವರೂ ಭಾರತದಲ್ಲಿಯ ಸ್ಥಿತಿಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದರು.
ಭಾರತದಲ್ಲಿಯ 20 ಕೋಟಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಭಾರತ ಸರಕಾರದ ಬದ್ಧತೆಯ ಕುರಿತು ತಾನು ಗಂಭೀರವಾಗಿ ಕಳವಳಗೊಂಡಿದ್ದೇನೆ ಎಂದು ಹೇಳಿದ ಮಾರ್ಕ್‌ಲಿ, ಹೆಚ್ಚುತ್ತಿರುವ ರಾಷ್ಟ್ರವಾದದ ಬೆದರಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಭಾರತದ ಬದ್ಧತೆಯನ್ನು ದುರ್ಬಲಗೊಳಿಸುತ್ತಿರುವುದರಿಂದ ಸರಕಾರದಿಂದ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ಗುರಿಯಾಗಿಸಿಕೊಳ್ಳುವಿಕೆ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಮತ್ತು ಅಲ್ಪಸಂಖ್ಯಾತರ ವಿರುದ್ಧ ಧಾರ್ಮಿಕವಾಗಿ ಪ್ರೇರಿತ ತಾರತಮ್ಯವನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ ಎಂದು ಹೇಳಿದರು.
ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವರದಿಗಳನ್ನು ಪ್ರಸ್ತಾಪಿಸಿದ ನ್ಯೂಮನ್, ಜಾಗತಿಕ ಮಟ್ಟದಲ್ಲಿ ಭಾರತದ ನಿಷ್ಪಕ್ಷತೆ ಮತ್ತು ಸ್ಥಾನಗಳಿಗೆ ಈಗಾಗಲೇ ಹಾನಿಯುಂಟಾಗಿದೆ. ಫ್ರೀಡಂ ಹೌಸ್ ಭಾರತದ ಪ್ರಜಾಪ್ರಭುತ್ವಕ್ಕಾಗಿ ತನ್ನ ರೇಟಿಂಗ್‌ನ್ನು ‘ಮುಕ್ತ’ದಿಂದ ‘ಭಾಗಶಃ ಮುಕ್ತ’ಕ್ಕೆ ತಗ್ಗಿಸಿದೆ. ಇದು ಶೋಚನೀಯವಾಗಿದೆ ಎಂದು ಹೇಳಿದರೆ, ವಿದೇಶ ವ್ಯವಹಾರಗಳ ಸಮಿತಿಯ ಸದಸ್ಯರೂ ಆಗಿರುವ ಲೆವಿನ್, ತಾನು ಪ್ರೀತಿಸುವ ದೇಶವನ್ನು ತಾನೇಕೆ ಬಹಿರಂಗವಾಗಿ ಟೀಕಿಸುತ್ತಿದ್ದೇನೆ? ಏಕೆಂದರೆ ತಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಅದರ ಜನತೆಯ ಮೇಲಿನ ದಾಳಿಗಳನ್ನು ಅಂತ್ಯಗೊಳಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.
ಭಾರತದಲ್ಲಿ ಯಾವುದೇ ಭಯವಿಲ್ಲದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತಿದೆ ಎನ್ನುವುದನ್ನು 30ಕ್ಕೂ ಅಧಿಕ ಸಾಮಾಜಿಕ ಸಂಘಟನೆಗಳು ಅಂಗೀಕರಿಸಿರುವ ನಿರ್ಣಯವು ಗಮನಕ್ಕೆ ತೆಗೆದುಕೊಂಡಿದೆ. ಶೋಷಿತ ಸಮುದಾಯಗಳಿಗೆ ಕಿರುಕುಳ, 'ಲವ್ ಜಿಹಾದ್' ವ್ಯಾಖ್ಯಾನ, ಮತಾಂತರ ವಿರೋಧಿ ಕಾನೂನುಗಳು ಮತ್ತು ಪೌರತ್ವ ಕಾಯ್ದೆ ಇವೆಲ್ಲವೂ ಭೇದಾತ್ಮಕವಾಗಿವೆ ಎನ್ನುವುದನ್ನು ಬೆಟ್ಟು ಮಾಡಿರುವ ನಿರ್ಣಯವು, ಆರೆಸ್ಸಸ್‌ನ ಇತಿಹಾಸವನ್ನೂ ದಾಖಲಿಸಿದೆ ಎಂದು telegraphindia.com ವರದಿ ಮಾಡಿದೆ.







