ಲಸಿಕಾ ರಾಜಕಾರಣದಂತಹ ವರ್ತನೆಯಿಂದ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ: ಸಿ.ಟಿ. ರವಿ

ಚಿಕ್ಕಮಗಳೂರು, ಜು.17: ಲಸಿಕಾ ರಾಜಕಾರಣದಂತ ಗೂಸುಂಬೆ ರಾಜಕಾರಣದಿಂದ ಕಾಂಗ್ರೆಸ್ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಅಪಪ್ರಚಾರ ನಡೆಸಿದರು. ಸಿದ್ದರಾಮಯ್ಯ ಏನೆಂದು ಹೇಳಿದರು? ಡಿ.ಕೆ.ಶಿವಕುಮಾರ್ ಏನೆಂದು ಟ್ವೀಟ್ ಮಾಡಿದರು? ಜಾರ್ಖಂಡ್ ಆರೋಗ್ಯ ಸಚಿವರ ಹೇಳಿಕೆ ನೆನಪು ಮಾಡಬೇಕಾ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‍ನವರ ಎಡಬಿಡಂಗಿತನ ಅರಿತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತ ಲಸಿಕೆ ಘೋಷಣೆ ಮಾಡಿದರು. ಈ ಕ್ರೆಡಿಟ್ ಪ್ರಧಾನಿಗೆ, ಬಿಜೆಪಿಗೆ ಹೋಗಬಹುದು ಎಂದು ಸುಪ್ರಿಂಕೋಟ್ ಕಡೆ ಬೊಟ್ಟು ಮಾಡಿದರು. ಕಾಂಗ್ರೆಸ್‍ನವರಿಗೆ ದೂರಲು ಮೋದಿ ಬೇಕು ಒಳ್ಳೆಯದಕ್ಕೆ ಮೋದಿ ಬೇಡ ಎಂದರು.
ವಿಪಕ್ಷದಲ್ಲಿನ ಮುಖ್ಯಮಂತ್ರಿ ಸ್ಥಾನ ಪೈಪೋಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿರುವ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಸಹಜ. ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದೆ. ಇದು ತಿರುಕನ ಕನಸು ಎಂದು ಹೇಳಬೇಕೋ, ಹೊಸಪದ ಹುಟ್ಟು ಹಾಕಬೇಕೋ ಗೊತ್ತಾಗುತ್ತಿಲ್ಲವೆಂದು ವ್ಯಂಗ್ಯವಾಡಿದರು.
ಉತ್ತರ ಪ್ರದೇಶ, ಅಸ್ಸಾಂನಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ತರುವ ಕುರಿತು ಚರ್ಚೆ ನಡೆಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ರೂಪಿಸಬೇಕು. ಕಾಯ್ದೆ ಪರ ಜನಾಭಿಪ್ರಾಯ ಇದ್ದರೇ ರಾಜ್ಯದಲ್ಲೂ ಕಾಯ್ದೆ ಜಾರಿಗೆ ತರಲಿ, ಒತ್ತಾಯ ಪೂರ್ವಕವಾಗಿ ತರಲು ಇದು ತುರ್ತು ಪರಿಸ್ಥಿತಿಯಲ್ಲ ಎಂದು ಹೇಳಿದರು.
ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ಬಂದೂಕಿನ ಮನೆಯಲ್ಲಿ ಬೆದರಿಸೋಕೆ ನಾವು ನಕ್ಸಲರಲ್ಲ, ನಾವು ಬ್ಯಾಲೇಟ್ ಪೇಪರ್ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ದಾಟಿದೆ. ದೇಶದಲ್ಲಿ 140ಕೋಟಿ ದಾಟಿದೆ. ದೇಶ ಮತ್ತು ರಾಜ್ಯದ ಹಿತದ ದೃಷ್ಟಿಯಿಂದ ಜನಾಭಿಪ್ರಾಯ ರೂಪುಗೊಂಡರೆ ಕಾಯ್ದೆ ಜಾರಿಗೆ ತರಲಿ ಎಂದರು.







