ಬದಲಾದ ಪರೀಕ್ಷಾ ವಿಧಾನ: ಉಡುಪಿ ಜಿಲ್ಲೆಯ 77 ಕೇಂದ್ರಗಳು ಎಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜು

ಉಡುಪಿ, ಜು.17: ಕೊರೋನ ಆತಂಕ, ಅಬ್ಬರ ತಗ್ಗುತ್ತಿರುವ ಮಧ್ಯೆ ಬದಲಾದ ಪರೀಕ್ಷಾ ವಿಧಾನದೊಂದಿಗೆ 2021ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಗಳ ಪ್ರಾರಂಭಕ್ಕೆ ಉಡುಪಿ ಜಿಲ್ಲೆಯ 77 ಕೇಂದ್ರಗಳು ಸರ್ವ ಸನ್ನದ್ಧವಾಗಿ ಸಜ್ಜುಗೊಂಡಿವೆ.
ಜು.19 ಸೋಮವಾರ ಹಾಗೂ ಜು.22 ಗುರುವಾರ ಬೆಳಗ್ಗೆ 10:30ರಿಂದ ಅಪರಾಹ್ನ 1:30ರವರೆಗೆ ಎರಡು ದಿನ ಈ ಬಾರಿಯ ಪರೀಕ್ಷೆಗಳು ನಡೆಯಲಿವೆ. ರೆಗ್ಯುಲರ್ ವಿದ್ಯಾರ್ಥಿಗಳು, ಮರುಪರೀಕ್ಷೆ ತೆಗೆದುಕೊಳ್ಳುವವರು ಹಾಗೂ ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 13931 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ 12881 ವಿದ್ಯಾರ್ಥಿಗಳು ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದಾರೆ.
ಬ್ರಹ್ಮಾವರ ತಾಲೂಕಿನ 77 ಶಾಲೆಗಳ 2705 ಮಂದಿ, ಬೈಂದೂರು ತಾಲೂಕಿನ 32 ಶಾಲೆಗಳ 2134 ಮಂದಿ, ಕಾರ್ಕಳ ತಾಲೂಕಿನ 56 ಶಾಲೆಗಳ 2743, ಕುಂದಾಪುರ ತಾಲೂಕಿನ 42 ಶಾಲೆಗಳ 2768 ಹಾಗೂ ಉಡುಪಿ ತಾಲೂಕಿನ 72 ಶಾಲೆಗಳ 3581 ಮಂದಿ ಸೇರಿದಂತೆ ಜಿಲ್ಲೆಯ ಒಟ್ಟು 259 ಶಾಲೆಗಳ ಒಟ್ಟು 13,931 ಮಂದಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಇದಕ್ಕಾಗಿ ಹಳೆ 51 ಹಾಗೂ ಹೊಸದಾಗಿ ನಿಯೋಜಿಸಲಾದ 26 ಕೇಂದ್ರಗಳು ಸೇರಿದಂತೆ ಒಟ್ಟು 77 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವುಗಳಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ 14, ಬೈಂದೂರಿನಲ್ಲಿ 13, ಕಾರ್ಕಳದಲ್ಲಿ 16, ಕುಂದಾಪುರದಲ್ಲಿ 13 ಹಾಗೂ ಉಡುಪಿಯಲ್ಲಿ 21 ಪರೀಕ್ಷಾ ಕೇಂದ್ರಗಳಿವೆ.
ಒಟ್ಟು 1780 ಕೊಠಡಿಗಳನ್ನು ಪರೀಕ್ಷೆಗಳಿಗಾಗಿ ಬಳಸಲಾಗುತ್ತಿದೆ. ಪ್ರತಿ ಕೊಠಡಿಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ನಾಲ್ವರು ಹೆಚ್ಚುವರಿ ಮೇಲ್ವಿಚಾರಕರು ನೇಮಕಗೊಂಡಿದ್ದಾರೆ. 77 ಕೇಂದ್ರಗಳಿಗೂ ಮುಖ್ಯ ಅದೀಕ್ಷಕರನ್ನು, ಕಸ್ಟೋಡಿಯನ್‌ರನ್ನು, ಮೊಬೈಲ್ ಸ್ವಾಧೀನಾಧಿಕಾರಿಗಳನ್ನು, ಸ್ಥಳೀಯ ಜಾಗೃತದಳವನ್ನು, ಮಾರ್ಗಾಧಿಕಾರಿಗಳು, ಶಿಸ್ತುಪಾಲನೆಗಾಗಿ ದೈಹಿಕ ಶಿಕ್ಷಕರನ್ನು, ಸ್ಕೌಟ್ ಮತ್ತು ಗೈಡ್ಸ್ ಗಳನ್ನು ನೇಮಿಸಲಾಗಿದೆ ಎಂದು ಉಡುಪಿ ಡಿಡಿಪಿಐ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಸಿಸಿಟಿವಿ ಕೆಮರಾ: ಪರೀಕ್ಷೆಗಳಲ್ಲಿ ಮೊದಲು ನಿಗದಿಯಾಗಿದ್ದ 51 ಕೇಂದ್ರಗಳಲ್ಲೂ ಸಿಸಿಟಿವಿ ಕೆಮರಾಗಳಿವೆ. ಈಗ ಹೊಸದಾಗಿ ಸಜ್ಜುಗೊಳಿಸಿ ರುವ 26 ಕೇಂದ್ರಗಳಲ್ಲಿ ಭಾಗಶ: ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ.ಪ್ರತಿ ಕೇಂದ್ರದಲ್ಲಿ ಒಂದು ಆರೋಗ್ಯ ಇಲಾಖೆಯ ಕ್ಯಾಂಪ್ ತಂಡವಿರುತ್ತದೆ. ಅಲ್ಲದೇ ಪ್ರತಿ ಕೇಂದ್ರವನ್ನು ಸಂಪೂರ್ಣವಾಗಿ ಸ್ಯಾನಟೈಸ್ ಮಾಡಲಾಗಿದೆ. ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ಕೊಠಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಾಗೂರ ತಿಳಿಸಿದರು.
ಪರೀಕ್ಷೆ ಬರೆಯಲು ಮಾಹಿತಿ: ಈ ಬಾರಿ ಬದಲಾಗಿರುವ ಪರೀಕ್ಷಾ ಪದ್ಧತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ಪ್ರತಿ ವಿಷಯವಾರು ವಾಟ್ಸಪ್ ಗ್ರೂಪ್ ಗಳನ್ನು ರಚಿಸಿ ಅದರ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ತರಬೇತಿ ನೀಡಲಾಗಿದೆ. ಆನ್‌ಲೈನ್ ಮೂಲಕವೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸಲಾಗಿದೆ. ಹಾಗೂ ವಿಷಯವಾರು ಪ್ರತಿಯೊಬ್ಬರ ಪ್ರಗತಿ ಪರಿಶೀಲನೆ ನಡೆಸಲಾಗಿದೆ.
ಅದೇ ರೀತಿ ಪ್ರತಿ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೂ ಬದಲಾಗಿರುವ ಪರೀಕ್ಷಾ ಪದ್ಧತಿ ಕುರಿತು ತಿಳಿಸಲಾಗಿದೆ. ಹೆತ್ತವರು ಯಾವುದೇ ಆತಂಕ ಗೊಂದಲಗಳಿಲ್ಲದೇ ಮಕ್ಕಳನ್ನು ಧೈರ್ಯವಾಗಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಬಹುದು. ಅವರ ಸುರಕ್ಷತೆಗೆ ಬೇಕಾದ ಎಲ್ಲಾ ವಾತಾವರಣ ಜಿಲ್ಲೆಯ 77 ಪರೀಕ್ಷಾ ಕೇಂದ್ರಗಳಲ್ಲೂ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಾವುದೇ ದುಗುಡ, ದುಮ್ಮಾನ, ಆತಂಕಗಳಿಲ್ಲದೇ ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯಬಹುದು ಎಂದು ಡಿಡಿಪಿಐ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಆರೋಗ್ಯ ತಪಾಸಣಾ ಕೇಂದ್ರ
ಪ್ರತಿ ಕೇಂದ್ರದಲ್ಲಿ ತಲಾ 200 ವಿದ್ಯಾರ್ಥಿಗಳಿಗೊಂದು ಆರೋಗ್ಯ ತಪಾಸಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿ ಕೊಳ್ಳಲು ಆರು ಅಂಡಿ ಅಂತರದ ಚೌಕ್‌ಗಳನ್ನು ಪ್ರತಿ ಕೇಂದ್ರದಲ್ಲಿ ಹಾಕಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್‌ಗಳನ್ನು ವಿತರಿಸಲಾಗುತ್ತದೆ.
ಕೊರೋನ ಲಕ್ಷಣ ಇರುವ ಮಕ್ಕಳಿಗೆ ಪ್ರತಿ ಕೇಂದ್ರದಲ್ಲಿ ಮೀಸಲಿರಿಸಿದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ 2266 ಸಿಬ್ಬಂದಿಗಳಿಗೂ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ಈಗಾಗಲೇ ಜಿಲ್ಲಾಧಿಕಾರಿಗಳು ಕಲಂ 144 ಜಾರಿಗೊಳಿಸಿದ್ದಾರೆ.
ಪ್ರತಿ ಕೇಂದ್ರಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ತಾಲೂಕು ಹಂತದಲ್ಲಿ ಮಾಡಿಕೊಳ್ಳಲಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದಿ ದ್ದಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಪ್ರತಿ ಕೇಂದ್ರದಲ್ಲೂ ಹೆಚ್ಚುವರಿ ಎರಡು ವಾಹನಗಳನ್ನು ಇಡಲಾಗಿದೆ.
ಪರೀಕ್ಷಾ ವೇಳಾಪಟ್ಟಿ
ಜು.19ರ ಮೊದಲ ದಿನ ಬೆಳಗ್ಗೆ 10:30ರಿಂದ ಅಪರಾಹ್ನ 1:30ರವರೆಗೆ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಜು.22ರ ಎರಡನೇ ದಿನ ಬೆಳಗ್ಗೆ 10:30ರಿಂದ 1:30ರವರೆಗೆ ಭಾಷಾ ವಿಷಯಗಳಾದ ಪ್ರಥಮ, ದ್ವಿತೀಯ, ತೃತೀಯ ಭಾಷಾ ಪರೀಕ್ಷೆ ನಡೆಯಲಿದೆ. ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು 8:30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ತಿಳಿಸಲಾಗಿದೆ. 10 ರವರೆಗೆ ಅವರಿಗೆ ಓದಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಬರುವಾಗ ಬೇಕಿದ್ದರೆ ತಮ್ಮದೇ ನೀರು, ಲಘು ಉಪಹಾರ ತರಬಹುದು.









