ಷೇರು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ದರೋಡೆಗೈದು, ಖಾತೆಯಿಂದ ಹಣ ಡ್ರಾ ಮಾಡಲು ಯತ್ನ : ಆರೋಪಿಗಳು ಪರಾರಿ

ಸಾಂದರ್ಭಿಕ ಚಿತ್ರ
ಉಡುಪಿ, ಜು.17: ಷೇರು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ದರೋಡೆಗೈದ ತಂಡ, ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಲು ಯತ್ನಿಸಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ಉಡುಪಿ ನಗರದ ಕೋರ್ಟ್ ರಸ್ತೆಯಲ್ಲಿ ನಡೆದಿದೆ.
ತುಮಕೂರಿನ ಅಶೋಕ್ ಕುಮಾರ್ (25) ಎಂಬವರು ಉಡುಪಿ ನಗರದ ವಾದಿರಾಜ ಕಾಂಪ್ಲೆಕ್ಸ್ನಲ್ಲಿ ಷೇರು ಮಾರುಕಟ್ಟೆ ವ್ಯವಹಾರ ನಡೆಸು ತ್ತಿದ್ದು, ಜು.16ರಂದು ಸಂಜೆ ವೇಳೆ ಸಂತೋಷ್ ಹಾಗೂ ಇತರರು ಸಂಚು ರೂಪಿಸಿ ಅಶೋಕ್ ಕುಮಾರ್ ಅವರನ್ನು ಅಜ್ಜರಕಾಡಿಗೆ ಕರೆದು ಕೊಂಡು ಹೋಗಿದ್ದರು. ನಂತರ ದುಷ್ಕರ್ಮಿಗಳು ಅಲ್ಲಿಂದ ಅಶೋಕ್ರನ್ನು ರೆಸಾರ್ಟ್ಗೆ ಕರೆದು ಕೊಂಡು ಹೋಗಿ ರಾತ್ರಿ ಪೂರ್ತಿ ಅಲ್ಲಿಯೇ ಇರಿಸಿ ಕೊಂಡಿದ್ದರು. ಈ ವೇಳೆ ದುಷ್ಕರ್ಮಿಗಳು ಪಿಸ್ತೂಲ್, ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿ ಅಶೋಕ್ ಕುಮಾರ್ ಬಳಿ ಇದ್ದ 2 ಲಕ್ಷ ರೂ. ನಗದು ಹಾಗೂ ಎರಡು ಮೊಬೈಲನ್ನು ದೋಚಿಸಿದ್ದರು ಎಂದು ದೂರಲಾಗಿದೆ.
ಅಶೋಕ್ ಕುಮಾರ್ ಅವರ ಉಡುಪಿ ಕೋರ್ಟ್ ಬಳಿ ಇರುವ ಕೆನರಾ ಬ್ಯಾಂಕಿನ ಖಾತೆಯಲ್ಲಿ ಇನ್ನಷ್ಟು ಹಣ ಇರುವುದನ್ನು ದುಷ್ಕರ್ಮಿಗಳು ತಿಳಿದು ಕೊಂಡರು. ಆ ಖಾತೆಯಿಂದ 10 ಲಕ್ಷ ರೂ. ಡ್ರಾ ಮಾಡಿಸುವುದಕ್ಕಾಗಿ ದುಷ್ಕರ್ಮಿ ಗಳು ಇಂದು ಬೆಳಗ್ಗೆ ರೆಸಾರ್ಟ್ನಿಂದ ಅಶೋಕ್ ಕುಮಾರ್ ಅವರನ್ನು ಕಾರಿನಲ್ಲಿ ಬ್ಯಾಂಕಿನ ಬಳಿ ಕರೆದುಕೊಂಡು ಬಂದಿದ್ದರು.
ಒಬ್ಬ ಆರೋಪಿ ಅಶೋಕ್ ಜೊತೆ ಬ್ಯಾಂಕಿಗೆ ಹೋಗಿದ್ದು, ಉಳಿದವರು ಬ್ಯಾಂಕಿನ ಹೊರಗಡೆ ಕಾರಿನಲ್ಲಿಯೇ ಕುಳಿತುಕೊಂಡಿದ್ದರು. ಬ್ಯಾಂಕಿನೊಳಗೆ ಹೋದ ಅಶೋಕ್ ನೇರವಾಗಿ ಮ್ಯಾನೇಜರ್ ಛೇಂಬರ್ ಬಳಿ ತೆರಳಿ ಕಳ್ಳ ಕಳ್ಳ ಎಂದು ಕೂಗಿದರು. ಆಗ ಅಶೋಕ್ ಜೊತೆ ಬಂದ್ದ ವ್ಯಕ್ತಿ ಹೊರಗಡೆ ಓಡಿ ಹೋಗಿ ಹೊರಗೆ ನಿಂತಿದ್ದ ಕಾರಿನಲ್ಲಿ ಉಳಿದವರೊಂದಿಗೆ ಪರಾರಿಯಾದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಅಶೋಕ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.







