ವಿವಿಗಳಲ್ಲಿ ಅ.1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ: ಯುಜಿಸಿ
ಹೊಸದಿಲ್ಲಿ, ಜು.17: ದೇಶಾದ್ಯಂತ ವಿವಿಗಳು ಮತ್ತು ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷವು ಅ.1ರಿಂದ ಆರಂಭಗೊಳ್ಳಲಿದೆ ಮತ್ತು ಪ್ರವೇಶ ಪ್ರಕ್ರಿಯೆಯನ್ನು ಸೆ.30ರೊಳಗೆ ಪೂರ್ಣಗೊಳಿಸಬೇಕಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ವು ಹೊರಡಿಸಿರುವ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಸಿಬಿಎಸ್ಇ, ಐಸಿಎಸ್ಇ ಮತ್ತು ಎಲ್ಲ ರಾಜ್ಯ ಪರೀಕ್ಷಾ ಮಂಡಳಿಗಳು ಫಲಿತಾಂಶಗಳನ್ನು ಘೋಷಿಸಿದ ಬಳಿಕವೇ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸುವಂತೆ ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಎಲ್ಲ ಶಾಲಾ ಮಂಡಳಿಗಳು ಜು.31ರೊಳಗೆ 12ನೇ ತರಗತಿಯ ಫಲಿತಾಂಶಗಳನ್ನು ಘೋಷಿಸುವ ನಿರೀಕ್ಷೆಯಿದೆ. ಫಲಿತಾಂಶ ಘೋಷಣೆಯಲ್ಲಿ ಯಾವುದೇ ವಿಳಂಬವಾದರೆ ಹೊಸ ಶೈಕ್ಷಣಿಕ ವರ್ಷವು ಅ.18ರಿಂದ ಆರಂಭಗೊಳ್ಳಬಹುದು ಎಂದು ಯುಜಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯು ಆಫ್ಲೈನ್, ಆನ್ಲೈನ್ ಅಥವಾ ಸಂಯೋಜಿತ ರೂಪದಲ್ಲಿ ಮುಂದುವರಿಯಬೇಕು ಎಂದು ಆಯೋಗವು ಸ್ಪಷ್ಟಪಡಿಸಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಗಿಂದಾಗ್ಗೆ ಹೊರಡಿಸುವ ಅಗತ್ಯ ಶಿಷ್ಟಾಚಾರಗಳು ಮತ್ತು ಸಲಹೆಗಳನ್ನು ಅನುಸರಿಸಿ ಶಿಕ್ಷಣ ಸಂಸ್ಥೆಗಳು ಅ.1ರಿಂದ ಮುಂದಿನ ವರ್ಷದ ಜು.31ರ ಅವಧಿಗೆ ತರಗತಿಗಳು, ಪರೀಕ್ಷೆಗಳು,ಸೆಮಿಸ್ಟರ್,ಮಧ್ಯಂತರ ವಿರಾಮ ಇತ್ಯಾದಿಗಳನ್ನು ಯೋಜಿಸಬಹುದು ಎಂದು ಯುಜಿಸಿ ತಿಳಿಸಿದೆ.
ಮುಂದಿನ ವರ್ಷದ ಆ.31ರೊಳಗೆ ಅಂತಿಮ ವರ್ಷದ ಅಥವಾ ಅಂತಿಮ ಅವಧಿಯ ಪರೀಕ್ಷೆಗಳನ್ನು ನಡೆಸುವುದನ್ನು ವಿವಿಗಳು ಮತ್ತು ಕಾಲೇಜುಗಳಿಗೆ ಕಡ್ಡಾಯವಾಗಿಸಲಾಗಿದೆ ಮತ್ತು ಪರೀಕ್ಷೆಗಳನ್ನು ಆಫ್ಲೈನ್, ಆನ್ಲೈನ್ ಅಥವಾ ಸಂಯೋಜಿತ ರೂಪದಲ್ಲಿ ನಡೆಸಬಹುದಾಗಿದೆ.







