ಸೆರಂ ಆಸ್ಟ್ರಝೆನೆಕಾ ಲಸಿಕೆ ಪಡೆದವರು ಫ್ರಾನ್ಸ್ ಭೇಟಿಗೆ ಅವಕಾಶ
ಪ್ಯಾರಿಸ್, ಜು.17: ಭಾರತದಲ್ಲಿ ಅಭಿವೃದ್ಧಿಪಡಿಸಿದ ಆಸ್ಟ್ರಝೆನೆಕಾದ ಲಸಿಕೆಯನ್ನು ಪಡೆದಿರುವವರು ಫ್ರಾನ್ಸ್ ಗೆ ಭೇಟಿ ನೀಡಲು ಅಲ್ಲಿನ ಸರಕಾರ ಅವಕಾಶ ನೀಡಿದೆ. ಈ ಆದೇಶ ರವಿವಾರದಿಂದ ಜಾರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಡೆಲ್ಟಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ತಪಾಸಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ರವಿವಾರದಿಂದ ಬ್ರಿಟನ್, ಸ್ಪೇನ್, ಪೋರ್ಚುಗಲ್, ನೆದರ್ಲ್ಯಾಂಡ್, ಗ್ರೀಸ್ ನಿಂದ ಫ್ರಾನ್ಸ್ ಗೆ ಆಗಮಿಸುವವರು, ಫ್ರಾನ್ಸ್ ಗಡಿ ಪ್ರವೇಶಕ್ಕೂ 24 ಗಂಟೆ ಮೊದಲಿನ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಸೋಂಕಿನ ಅಧಿಕ ಅಪಾಯವಿರುವ ರಾಷ್ಟ್ರಗಳ ಪಟ್ಟಿಗೆ ಶನಿವಾರ ಟ್ಯುನೀಷಿಯಾ, ಇಂಡೋನೇಶಿಯಾ, ಕ್ಯೂಬಾ ಮತ್ತು ಮೊಝಾಂಬಿಕ್ ದೇಶಗಳನ್ನು ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ದೇಶಗಳಿಂದ ಆಗಮಿಸುವವರು ಎರಡೂ ಡೋಸ್ ಲಸಿಕೆ ಪಡೆದಿದ್ದರೆ ಅವರಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಮೂಲಗಳು ಹೇಳಿವೆ.
ಯುರೋಪಿಯನ್ ಯೂನಿಯನ್ ನ ಕೋವಿಡ್-19 ಪ್ರಮಾಣಪತ್ರವು ಯುರೋಪ್ನಲ್ಲಿ ತಯಾರಿಸಲಾದ ಆಸ್ಟ್ರಝೆನೆಕಾದ ಲಸಿಕೆಗೆ ಮಾತ್ರ ಮಾನ್ಯತೆ ನೀಡಿರುವುದರ ವಿರುದ್ಧ ಕೇಳಿಬಂದ ಜಾಗತಿಕ ಆಕ್ರೋಶದ ಬಳಿಕ, ಭಾರತದಲ್ಲಿ ಸೆರಂ ಸಂಸ್ಥೆ ಉತ್ಪಾದಿಸುವ ಆಸ್ಟ್ರಝೆನೆಕಾದ ಲಸಿಕೆ ಪಡೆದ ಪ್ರವಾಸಿಗರಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಬರಲಾಗಿದೆ.
ಯುರೋಪಿಯನ್ ಯೂನಿಯನ್ನ ಇತರ ಹಲವು ದೇಶಗಳು ಈಗಾಗಲೇ ಸೆರಂನ ಆಸ್ಟ್ರಝೆನೆಕಾ ಲಸಿಕೆಗೆ ಅನುಮೋದನೆ ನೀಡಿದೆ. ರಶ್ಯಾ ಅಥವಾ ಚೀನೀ ಸಂಸ್ಥೆ ಉತ್ಪಾದಿಸಿದ ಲಸಿಕೆಗಳಿಗೆ ಇದುವರೆಗೆ ಫ್ರಾನ್ಸ್ ಅನುಮೋದನೆ ನೀಡಿಲ್ಲ. ಯುರೋಪಿಯನ್ ಯೂನಿಯನ್ ಔಷದ ನಿಯಂತ್ರಕರು ದೃಢೀಕರಿಸಿದ ಫೈಝರ್, ಮೊಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಆಸ್ಟ್ರಝೆನೆಕಾ ಲಸಿಕೆಗಳಿಗೆ ಮಾತ್ರ ಅನುಮೋದನೆ ಲಭಿಸಿದೆ. ಈ ಮಧ್ಯೆ, ಫ್ರಾನ್ಸ್ನಲ್ಲಿ 2 ಲಸಿಕೆಗಳ ನಡುವಿನ ಅಂತರವನ್ನು 2 ವಾರದಿಂದ 1 ವಾರಕ್ಕೆ ಇಳಿಸಿದ್ದು, ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಸೆಪ್ಟಂಬರ್ 15ರೊಳಗೆ ಲಸಿಕೆ ನೀಡುವಂತೆ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಆದೇಶಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಬೇಕು ಮತ್ತು ಸಾರ್ವಜನಿಕ ಪ್ರದೇಶಗಳಿಗೆ ತೆರಳಲು ಲಸಿಕೆ ಆರೋಗ್ಯ ಕಾರ್ಡ್ ಹೊಂದಿರಬೇಕು ಎಂಬ ಕಾನೂನನ್ನು ಜನತೆ ವಿರೋಧಿಸಿದ್ದಾರೆ. ಒಂದು ವೇಳೆ ಲಸಿಕೆ ಪಡೆಯದಿದ್ದರೆ, ನೆಗೆಟಿವ್ ವರದಿಯ ಪ್ರಮಾಣಪತ್ರ ಹೊಂದಿರಬೇಕು ಎಂದು ಸೂಚಿಸಲಾಗಿದೆ. ಈ ಸೂಚನೆ ಹೊರಬೀಳುತ್ತಿದ್ದಂತೆಯೇ ದಾಖಲೆ ಸಂಖ್ಯೆಯಲ್ಲಿ ಜನತೆ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.