ವರದಕ್ಷಿಣೆ ಕಿರುಕುಳವು ಗಂಡನ ಮನೆಯನ್ನು ಮಹಿಳೆಯರಿಗೆ ಅಪಾಯಕಾರಿ ಸ್ಥಳವನ್ನಾಗಿಸುತ್ತಿದೆ: ಕೇರಳ ಹೈಕೋರ್ಟ್

ಕೊಚ್ಚಿ, ಜು.17: ವರದಕ್ಷಿಣೆ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇರಳ ಉಚ್ಚ ನ್ಯಾಯಾಲಯವು, ವರದಕ್ಷಿಣೆಗಾಗಿ ಮಹಿಳೆಯರ ಮೇಲೆ ದಾಳಿಗಳು ಅವರ ಪಾಲಿಗೆ ಪತಿಗೃಹಗಳನ್ನು ಅತ್ಯಂತ ಅಪಾಯಕಾರಿ ಸ್ಥಳವನ್ನಾಗಿಸಿವೆ. ಕಠಿಣ ಕಾನೂನುಗಳು ಅಸ್ತಿತ್ವದಲ್ಲಿದ್ದರೂ ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ ಎಂದು ಹೇಳಿದೆ.
ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಒತ್ತಡ ಹೇರಲು ಪತಿಯ ಕುಟುಂಬದಿಂದ ವಿವಾಹಿತ ಮಹಿಳೆಗೆ ಕಿರುಕುಳ,ನಿಂದನೆ ಮತ್ತು ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಗಂಡಂದಿರು ಮತ್ತು ಅತ್ತೆಮಾವಂದಿರ ವಿರುದ್ಧ ಬಹಳಷ್ಟು ಪ್ರಕರಣಗಳು ದಾಖಲಾಗಿದ್ದರೂ ವಿವಾಹಿತ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರತ್ತ ಸಮಾಜದ ಧೋರಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಶಾಶ್ವತವಾಗಿ ನಿಲ್ಲಿಸಬೇಕಿದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತು.
ಪತ್ನಿಗೆ ಮತ್ತು ಆಕೆಯ ವಯಸ್ಸಾದ ತಂದೆಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ತಿರುವನಂತಪುರ ಜಿಲ್ಲೆಯ ವಟ್ಟಪ್ಪಾರ ನಿವಾಸಿ ಡಾ.ಸಿಜೊ ರಾಜನ್ ಆರ್ವಿ,ಅವರ ಹೆತ್ತವರು ಮತ್ತು ಸೋದರನ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ನ್ಯಾ.ವಿ.ಶಿರ್ಕಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಿಜೊ ಪತ್ನಿ ಕೂಡ ವೈದ್ಯೆಯಾಗಿದ್ದು 2021, ಎ.14ರಂದು ಅವರ ವಿವಾಹ ನಡೆದಿತ್ತು. ಈ ಸಂದರ್ಭ ಆಕೆಯ ಹೆತ್ತವರು ಚಿನ್ನಾಭರಣಗಳು,ಕಾರು,ನಗದು ಮತ್ತು ಸ್ಥಿರಾಸ್ತಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಇನ್ನಷ್ಟು ವರದಕ್ಷಿಣೆಗಾಗಿ ರಾಜನ್ ಮತ್ತು ಕುಟುಂಬ ಸದಸ್ಯರು ಆಕೆಗೆ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.







