ಮಂಗಳೂರು: ಹಾಡಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರು, ಜು.17: ಮನೆಗೆ ಬೀಗ ಹಾಕಿ ಹೊರಗೆ ಹೋದ ಸಂದರ್ಭದಲ್ಲಿ ಹಾಡುಹಗಲೇ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೋಡಿಕಲ್ ಆಲಗುಡ್ಡೆಯಲ್ಲಿ ನಡೆದಿದೆ.
ಇಲ್ಲಿನ ಅರುಣ್ ಕುಮಾರ್ ಎಂಬವರು ಬೆಳಗ್ಗೆ 9:15ಕ್ಕೆ ಮನೆಗೆ ಬೀಗ ಹಾಕಿ ಪತ್ನಿ ಮತ್ತು ಪುತ್ರಿಯೊಂದಿಗೆ ನಗರದ ಅಳಕೆಗೆ ಕೆಲಸದ ನಿಮಿತ್ತ ಹೋಗಿದ್ದರು. ಸಂಜೆ 5:20ಕ್ಕೆ ವಾಪಸಾದಾಗ ಮನೆಯ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ಆಯುಧದಿಂದ ಮೀಟಿ ಎಬ್ಬಿಸಿರುವುದು ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ ಕಬ್ಬಿಣದ ಕಪಾಟುಗಳನ್ನು ಒಡೆದು ಅದರಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಗೋದ್ರೇಜ್ ಕಪಾಟಿನ ಒಳಗಡೆ ಲಾಕರ್‌ನ್ನು ಒಡೆದಿದ್ದಾರೆ. ಅದರೊಳಗಿದ್ದ ಒಟ್ಟು 15 ಪವನ್ ತೂಕದ 14 ಚಿನ್ನದ ಬಳೆಗಳು, 15 ಪವನ್ ತೂಕದ 3 ಚಿನ್ನದ ಸರ, 2 ಪವನ್ ತೂಕದ ಚಿನ್ನದ ಶಾರ್ಟ್ ನೆಕ್ಲೇಸ್, 5 ಪವನ್ ತೂಕದ 4 ಜತೆ ಚಿನ್ನದ ಕಿವಿಯೋಲೆ, 8 ಪವನ್ ತೂಕದ 10 ಚಿನ್ನದ ಉಂಗುರಗಳು ಸೇರಿದಂತೆ ಒಟ್ಟು ಅಂದಾಜು 14 ಲಕ್ಷ ರೂ. ಬೆಲೆಬಾಳುವ 360 ಗ್ರಾಂ ಚಿನ್ನಾಭರಣ ಹಾಗೂ ಹಾಗೂ 1,700 ರೂ. ನಗದು ಕಳವು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





