ಯುಪಿಎಸ್ಸಿ ಪರೀಕ್ಷೆಯಲ್ಲಿ ಜಾತಿ ತಾರತಮ್ಯ: ಆಯೋಗದ ಅಧ್ಯಕ್ಷರಿಗೆ ದಿಲ್ಲಿ ಸಚಿವರ ದೂರು

ಹೊಸದಿಲ್ಲಿ, ಜು.17: ಯುಪಿಎಸ್ಸಿ ಪರೀಕ್ಷೆಯಲ್ಲಿ ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಸಂದರ್ಶನದ ಅಂಕಗಳನ್ನು ನೀಡುವಾಗ ವ್ಯವಸ್ಥಿತ ತಾರತಮ್ಯ ನಡೆಯುತ್ತಿದೆ ಎಂದು ದಿಲ್ಲಿ ಸರಕಾರದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ ಅಧ್ಯಕ್ಷ ಪ್ರದೀಪಕುಮಾರ ಜೋಶಿಯವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ಎದುರಿಸುತ್ತಿರುವ ಜಾತಿ ಆಧಾರಿತ ತಾರತಮ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಪತ್ರವು,ಪರಿಸ್ಥಿತಿಯ ಸುಧಾರಣೆಗೆ ಸಲಹೆಗಳನ್ನು ಸೂಚಿಸಿದೆ.
ತಾರತಮ್ಯದ ಬಗ್ಗೆ ಮೀಸಲು ವರ್ಗಗಳಿಗೆ ಸೇರಿದ ಹಲವಾರು ಅಭ್ಯರ್ಥಿಗಳು ತನಗೆ ಅಹವಾಲುಗಳನ್ನು ಸಲ್ಲಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿರುವ ಗೌತಮ,ಸಂದರ್ಶನ ಮಂಡಳಿಯ ಸದಸ್ಯರಿಗೆ ಅಭ್ಯರ್ಥಿಗಳ ಜಾತಿ ಗೊತ್ತಾಗದಂತೆ ಮಾಡಿದರೆ ಹಾಗೂ ಸಂದರ್ಶನಕ್ಕೆ ಸಾಮಾನ್ಯ ವರ್ಗದ ಮತ್ತು ಮೀಸಲು ವರ್ಗದ ಪ್ರತ್ಯೇಕ ಗುಂಪುಗಳ ಬದಲು ಅಭ್ಯರ್ಥಿಗಳನ್ನು ಯಾದ್ರಚ್ಛಿಕವಾಗಿ ಕರೆದರೆ ಈ ತಾರತಮ್ಯವನ್ನು ನಿವಾರಿಸಬಹುದು ಎಂದು ಹೇಳಿದ್ದಾರೆ.





