ಮೂಡಿಗೆರೆ ಶಾಸಕ ಕುಮಾರಸ್ವಾಮಿಯಿಂದ ಜೀವ ಬೆದರಿಕೆ: ನಿಡುವಾಳೆ ಗ್ರಾಪಂ ಸದಸ್ಯನ ಆರೋಪ

ಎಂ.ಪಿ.ಕುಮಾರಸ್ವಾಮಿ / ಸಚಿನ್ ಮರ್ಕಲ್
ಚಿಕ್ಕಮಗಳೂರು, ಜು.17: ಅತಿವೃಷ್ಟಿ ಸಂತ್ರಸ್ತರು ಮತ್ತು ಹಾನಿಗೊಳಗಾದ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಮಾಡದೆ, ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕರ ಬಳಿ ಮಾತನಾಡಿರುವ ಹಾಗೂ ಕ್ಷೇತ್ರದ ಅಭಿವೃದ್ಧಿ ಸಂಬಂಧ ಶಾಸಕರನ್ನು ಪ್ರಶ್ನೆ ಮಾಡಿರುವ ತನಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪೊಲೀಸರ ಮೂಲಕ ಬೆದರಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಜೀವಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ನಿಡುವಾಳೆ ಗ್ರಾಪಂ ಸದಸ್ಯ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಮುಖಂಡ ಸಚಿನ್ ಮರ್ಕಲ್ ಆರೋಪಿಸಿದ್ದಾರೆ.
ಈ ಸಂಬಂಧ ವೀಡಿಯೊ ಹಾಗೂ ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಅವರು, ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಸಂಭವಿಸಿದ್ದು, ಅಪಾರ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಜನರು ಮನೆ, ಕೃಷಿ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಸಂತ್ರಸ್ತಗೆ ಪರಿಹಾರ ಒದಗಿಸಿಲ್ಲ. ಹಾನಿಗೊಳಗಾಗಿರುವ ರಸ್ತೆಗಳ ಅಭಿವೃದ್ಧಿಗೆ ನಿರ್ಲಕ್ಷ ವಹಿಸಲಾಗಿದೆ. ನೀಡುವಾಳೆ ಗ್ರಾಪಂ ವ್ಯಾಪ್ತಿಯ ಮರ್ಕಲ್, ಚಂದುವಳ್ಳಿ, ಬಾಳೂರು, ಬಲಿಗೆ, ಮಧುಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆಯನ್ನು ನಿರ್ಮಿಸಿಕೊಟ್ಟಿಲ್ಲ. ಪರಿಹಾರಕ್ಕೆ ಬಂದ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದೆ. ಈ ಪೋಸ್ಟ್ನಲ್ಲಿ ಯಾವುದೇ ಶಾಸಕರು, ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳ ಹೆಸರನ್ನು ಬರೆದಿರಲಿಲ್ಲ. ಆದರೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕುಂಬಳಕಾಯಿ ಕಳ್ಳ ಎಂದರೆ ತಾನೇ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅವರು ವೀಡಿಯೊದಲ್ಲಿ ದೂರಿದ್ದಾರೆ.
ತನ್ನ ಪೋಸ್ಟ್ ಗಮನಿಸಿರುವ ಶಾಸಕ ಕುಮಾರಸ್ವಾಮಿ, ಅವರು ಪೊಲೀಸರ ಮೂಲಕ ಬೆದರಿಸುತ್ತಿದ್ದಾರೆ. ಪದೇ ಪದೇ ಪೊಲೀಸ್ ಠಾಣೆಗೆ ಕರೆಸಿ ಹೆದರಿಸುತ್ತಿದ್ದಾರೆ. ತನಗೆ ಎಚ್ಚರಿಕೆ ನೀಡುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅತಿವೃಷ್ಟಿ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ ಸಂದರ್ಭ ಎಂ.ಪಿ.ಕುಮಾರಸ್ವಾಮಿ ಅವರು ತನ್ನನ್ನು ಕರೆಸಿಕೊಂಡು ಫೇಸ್ಬುಕ್ ಪೋಸ್ಟ್ಗಳನ್ನು ಡಿಲೀಟ್ ಮಾಡಿಸಿದ್ದಾರೆ. ತಾನು ಎಲ್ಲೂ ಅವ್ಯವಹಾರ ಮಾಡಿಲ್ಲ ಎಂದಿದ್ದಾರೆ. ಹಾಗಾದರೆ ಅತಿವೃಷ್ಟಿ ಪ್ರದೇಶಗಳ ಅಭಿವೃದ್ಧಿಗೆ ಬಂದ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿರುವ ಸಚಿನ್, ಬಿಜೆಪಿ ಕಾರ್ಯಕರ್ತರ ಮನೆಗಳು, ಜಮೀನುಗಳಲ್ಲಿ ತಡೆಗೋಡೆ ನಿರ್ಮಿಸಿಕೊಡಲಾಗಿದೆ. ಆದರೆ ಅತಿವೃಷ್ಟಿಯಿಂದ ಹಾಳಾದ ಪ್ರದೇಶಗಳಲ್ಲಿ ತಡೆಗೋಡೆ, ರಸ್ತೆ, ಮೋರಿ ನಿರ್ಮಾಣ ಕೆಲಸವಾಗಿಲ್ಲ ಎಂದು ಆರೋಪಿಸಿದ್ದಾರೆ.
ತನ್ನ ಪೋಸ್ಟ್ ವಿಚಾರಕ್ಕೆ ಶಾಸಕ ಕುಮಾರಸ್ವಾಮಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ತನಗೆ ಬೆದರಿಕೆ ಹಾಕುತ್ತಿದ್ದಾರೆ. ಪದೇ ಪದೇ ಬೇರೆಯವರ ಮೂಲಕ ಕರೆ ಮಾಡಿಸಿ ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದು, ಈ ಸಂಬಂಧ ಎಸ್ಪಿ ಅವರಿಗೆ ದೂರು ನೀಡುತ್ತೇನೆ. ನನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಶಾಸಕ ಕುಮಾರಸ್ವಾಮಿಯೇ ಕಾರಣ ಎಂದು ಸಚಿನ್ ವೀಡಿಯೊದಲ್ಲಿ ಹೇಳಿದ್ದಾರೆ.







