ಬೆಂಗಳೂರು: ಆಪ್ ಸೇರಿದ ನಿವೃತ್ತ ಕೆಎಎಸ್ ಅಧಿಕಾರಿ ಎಂ.ರವಿಶಂಕರ್
ಬೆಂಗಳೂರು, ಜು.17: ರಾಜ್ಯದ ನಿವೃತ್ತ ಕೆಎಎಸ್ ಅಧಿಕಾರಿ ಎಂ.ರವಿಶಂಕರ್ ಅವರು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾದರು.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಪ್ ಪಕ್ಷದ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಸದಸ್ಯತ್ವ ಪಡೆಯುವ ಮೂಲಕ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಇರುವ ರಾಜಕೀಯ ಪಕ್ಷಗಳಲ್ಲಿ ಪ್ರಾಮಾಣಿಕ ಪಕ್ಷವಾಗಿ ಇರುವ ಪಕ್ಷವೆಂದರೆ ಅದು ಆಮ್ ಆದ್ಮಿ ಪಕ್ಷ. ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಪಕ್ಷವಾಗಿದೆ ಎಂದರು.
ನಾವು ಹೊರಗೆ ಇದ್ದುಕೊಂಡು ರಾಜಕಾರಣವನ್ನು ಸಾಕಷ್ಟು ಟೀಕೆ ಮಾಡಬಹುದು. ಆದರೆ, ಪ್ರಾಮಾಣಿಕವಾಗಿ ರಾಜಕಾರಣ ಮಾಡಿ ಜನರಿಗೆ ಸೇವೆ ಸಲ್ಲಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮಗೆ ಕಾಣಿಸಿದ್ದು ಆಮ್ ಆದ್ಮಿ ಪಕ್ಷ ಎಂದು ನುಡಿದರು.
ಎಎಪಿ ಪಕ್ಷದ ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಮಾತನಾಡಿ, ಈಗ ಸೇರ್ಪಡೆಗೊಂಡಿರುವ ಎಂ.ರವಿಶಂಕರ್ ಅವರ ಶ್ರಮ-ಸಲಹೆ-ಸೂಚನೆಗಳೊಂದಿಗೆ ಪಕ್ಷವು ಇನ್ನಷ್ಟು ಭದ್ರವಾಗಿ ಬೇರೂರುವ ದೃಢ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಮೋಹನ್ ದಾಸರಿ, ಜಗದೀಶ್ ವಿ.ಸದಂ ಸೇರಿದಂತೆ ಪ್ರಮುಖರಿದ್ದರು.





