ರಾಜೀನಾಮೆ ನೀಡಬೇಕೆಂದರೆ ಷರತ್ತುಗಳನ್ನು ಈಡೇರಿಸಬೇಕೆಂದ ಯಡಿಯೂರಪ್ಪ?: ವರದಿ

ಹೊಸದಿಲ್ಲಿ, ಜು. 17: ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದು ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದರಾದರೂ, ತನ್ನ ಕೆಲವು ಷರತ್ತುಗಳು ಈಡೇರಿದಲ್ಲಿ ಮಾತ್ರ ಪದತ್ಯಾಗಕ್ಕೆ ಸಿದ್ಧನಿದ್ದೇನೆ ಎಂದು ಅವರು ಶನಿವಾರ ಪಕ್ಷದ ಉನ್ನತ ನಾಯಕರಿಗೆ ತಿಳಿಸಿದ್ದಾರೆಂದು ಎನ್ಡಿಟಿವಿ ಹಾಗೂ ಇಂಡಿಯಾ ಟುಡೆ ಸುದ್ದಿವಾಹಿನಿಗಳು ವರದಿ ಮಾಡಿವೆ.
ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ಯಡಿಯೂರಪ್ಪ ಅವರು ಈ ಹೇಳಿಕೆ ನೀಡಿರುವುದಾಗಿ ಅವು ವರದಿಯಲ್ಲಿ ತಿಳಿಸಿವೆ.
ತಾನು ನಿಮ್ಮ ಎಲ್ಲ ನಿರ್ದೇಶನಗಳನ್ನು ಅನುಸರಿಸಲು ಸಿದ್ಧ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಆದರೆ, ತನ್ನೆಲ್ಲ ಷರತ್ತುಗಳನ್ನು ಈಡೇರಿಸಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ತನ್ನ ಪುತ್ರನಿಗೆ ಕೇಂದ್ರ ಸರಕಾರದಲ್ಲಿ ಸ್ಥಾನ ನೀಡಬೇಕು ಎಂಬ ಬೇಡಿಕೆ ಕೂಡ ಷರತ್ತಿನಲ್ಲಿ ಒಳಗೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಅಲ್ಲದೆ, ನರೇಂದ್ರ ಮೋದಿ ಅವರ ಎಲ್ಲ ನಿರ್ದೇಶನಗಳನ್ನು ಅನುಸರಿಸಲು ಸಿದ್ಧ. ತಾನು ಬಿಜೆಪಿಯ ಸಿದ್ಧಾಂತಕ್ಕೆ ಬದ್ಧ ಎಂದು ಅವರು ಬಿಜೆಪಿಯ ಹೈಕಮಾಂಡ್ ಗೆ ತಿಳಿಸಿರುವುದಾಗಿ ವರದಿ ಹೇಳಿದೆ. ಈ ವದಂತಿಗಳನ್ನು ಯಡಿಯೂರಪ್ಪ ತಳ್ಳಿಹಾಕಿದ್ದು ಇದು ಸತ್ಯವಲ್ಲ ಎಂದಿದ್ದಾರೆ.
‘‘ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ವಿಶೇಷ ಒತ್ತು ನೀಡಬೇಕು ಎಂದು ಅವರು ನನ್ನಲ್ಲಿ ಮನವಿ ಮಾಡಿದ್ದಾರೆ. ಇದೇ ಮಾತನ್ನು ಪ್ರಧಾನ ಮಂತ್ರಿ ಅವರು ಕೂಡ ಹೇಳಿದ್ದಾರೆ’’ ಎಂದು ನಡ್ಡಾ ಅವರೊಂದಿಗಿನ ಭೇಟಿ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.







