ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆಗೆ ಸಮಿತಿ ರಚನೆ
ಬೆಂಗಳೂರು, ಜು.17: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಸ್ವದೇಶಕ್ಕೆ ಗಡೀಪಾರು ಮಾಡಲು ಒಳಾಡಳಿತ ಇಲಾಖೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಪ್ರತಿ ತಿಂಗಳು ಪತ್ತೆಯಾದ, ಗಡಿಪಾರು ಮಾಡಲಾಗಿರುವ ವಿದೇಶಿ ಪ್ರಜೆಗಳ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸುವುದಾಗಿ ರಾಜ್ಯದ ಗೃಹ ಇಲಾಖೆ ತಿಳಿಸಿದ್ದು, ಈ ಸಮಿತಿಯಲ್ಲಿ ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಅಧ್ಯಕ್ಷರಾಗಿದ್ದರೆ, ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ, ರಾಜ್ಯ ಗುಪ್ತವಾರ್ತೆ ಪೊಲೀಸ್ ಅಧೀಕ್ಷಕರು, ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರು, ಎನ್‍ಐಸಿ ಸಮಿತಿಯ ಸದಸ್ಯರಾಗಿರುತ್ತಾರೆ.
ಪತ್ತೆಯಾಗುವ ಅಕ್ರಮ ವಿದೇಶಿಗರು ಯಾವ ದೇಶದವರು ಎಂಬುದು ಪತ್ತೆ ಮಾಡಿ ಆ ದೇಶಕ್ಕೆ ಅವರನ್ನು ಗಡಿಪಾರು ಮಾಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಗೃಹ ಇಲಾಖೆ ತಿಳಿಸಿದೆ.
ಈ ಪತ್ತೆ ಕಾರ್ಯಕ್ಕೆ ವಿದೇಶಿ ನೋಂದಣಾಧಿಕಾರಿಗಳ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗುವುದು ಎಂದು ಗೃಹ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.





