ವ್ಯಾಜ್ಯ ಪರಿಹಾರಕ್ಕೆ ಮಧ್ಯಸ್ಥಿಕೆಯೇ ಮೊದಲ ಹೆಜ್ಜೆಯಾಗಲಿ: ಸಿಜೆಐ

ಹೊಸದಿಲ್ಲಿ, ಜು.18: ದೇಶದ ಮೂರು ಹಂತದ ನ್ಯಾಯ ವ್ಯವಸ್ಥೆಯಲ್ಲಿ 4.5 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ವ್ಯಾಜ್ಯಗಳನ್ನು ಬಗೆಹರಿಸಲು ಮಧ್ಯಸ್ಥಿಕೆಯನ್ನು ಮೊದಲ ಹೆಜ್ಜೆಯಾಗಿ ಕಡ್ಡಾಯಪಡಿಸಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸುವ ಅಗತ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.
"ಮಧ್ಯಸ್ಥಿಕೆಯ ವ್ಯಾಪ್ತಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಮಿಷಿನ್ ಮೋಡ್ ಪ್ರವೇಶಿಸಲು ಭಾರತಕ್ಕೆ ಇದು ಸಕಾಲ. ಮಧ್ಯಸ್ಥಿಕೆಯನ್ನು ಅಗ್ಗದ ಹಾಗೂ ವೇಗದ ವ್ಯಾಜ್ಯ ನಿರ್ಣಯ ವ್ಯವಸ್ಥೆಯಾಗಿ ಜನಪ್ರಿಯ ಗಳಿಸಲು ಅಭಿಯಾನ ಆರಂಭಿಸಬೇಕು" ಎಂದು ಸಿಜೆಐ ಸಲಹೆ ಮಾಡಿದರು.
ಮಧ್ಯಸ್ಥಿಕೆಯನ್ನು ಮೊದಲ ಹೆಜ್ಜೆಯಾಗಿ ಕಡ್ಡಾಯಪಡಿಸುವ ಕ್ರಮ, ಮಧ್ಯಸ್ಥಿಕೆಯನ್ನು ಪ್ರಚುರಪಡಿಸುವಲ್ಲಿ ಮಹತ್ವದ್ದಾಗಲಿದೆ. ಬಹುಶಃ ಈ ನಿಟ್ಟಿನಲ್ಲಿ ಸಾರ್ವತ್ರಿಕ ಕಾನೂನನ್ನು ಜಾರಿಗೆ ತರುವುದು ಅಗತ್ಯ" ಎಂದು ಶನಿವಾರ ಭಾರತ- ಸಿಂಗಾಪುರ ಮಧ್ಯಸ್ಥಿಕೆ ಶೃಂಗದಲ್ಲಿ ಮಾತನಾಡುವ ವೇಳೆ ಪ್ರತಿಪಾದಿಸಿದರು.
ಸಾರ್ವಜನಿಕರಿಗೆ ಮಧ್ಯಸ್ಥಿಕೆ ಸೌಲಭ್ಯ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಹಾಗೂ ಇದನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಎಲ್ಲ ವ್ಯಾಜ್ಯ ನಿರ್ಣಯದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.







