ತಮಿಳುನಾಡು ವಿಧಾನಸಭೆ ಚುನಾವಣಾ ಟಿಕೆಟ್ ನೀಡುವ ಭರವಸೆ ನೀಡಿ ಬಿಜೆಪಿ ಕಾರ್ಯಕರ್ತನಿಗೆ 50 ಲಕ್ಷ ರೂ. ವಂಚನೆ
ನಾಲ್ವರ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ಈ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿ ಬಿಜೆಪಿ ಕಾರ್ಯಕರ್ತನಿಗೆ 50 ಲಕ್ಷ ರೂ. ವಂಚಿಸಿದ್ದಕ್ಕಾಗಿ ಪೊಲೀಸರು ನಾಲ್ಕು ಜನರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಒಬ್ಬಾತ ತಾನು ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದ ಎಂದು Times Of India ವರದಿ ಮಾಡಿದೆ.
ಭುವನೇಶ್ ಕುಮಾರ್ ತಮ್ಮ ದೂರಿನಲ್ಲಿ ನಾಲ್ವರಿಗೆ 50 ಲಕ್ಷ ರೂ. ಪಾವತಿಸಿರುವುದಾಗಿ ಹೇಳಿಕೊಂಡಿದ್ದಾನೆ. ರೆಡ್ಡಿ ಅವರ ಸಹಾಯಕ ಎಂದು ಹೇಳಿಕೊಂಡಿದ್ದ ನರೋಥಮನ್, ಆತನ ತಂದೆ ಚಿಟ್ಟಿ ಬಾಬು (ಹೈದರಾಬಾದ್ ಮೂಲದವ) ಜೊತೆಗೆ ವಿಜಯರಾಮನ್ ಹಾಗೂ ಆತನ ಮಗ ಶಿವ ಬಾಲಾಜಿ ವಂಚನೆ ಆರೋಪಿಗಳಾಗಿದ್ದಾರೆ.
ವಿಜಯರಾಮನ್ ಅವರು ನನಗೆ ನರೋಥಮನ್ ಅವರನ್ನು ಪರಿಚಯಿಸಿದ್ದಾರೆ. ಟಿಕೆಟ್ ನೀಡಬೇಕಾದರೆ 1 ಕೋ.ರೂ. ನೀಡಬೇಕೆಂದು ಬೇಡಿಕೆ ಇಡಲಾಗಿತ್ತು ಎಂದು ಕುಮಾರ್ ಹೇಳಿದ್ದಾರೆ.
ನಾನು ನಾಲ್ವರಿಗೆ 50 ಲಕ್ಷ ರೂ. ನಗದು ಪಾವತಿಸಿದ್ದೇನೆ. ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಾಗ, ಹಣವನ್ನು ವಾಪಸ್ ನೀಡುವಂತೆ ಹೇಳಿದ್ದೆ. ಅದಕ್ಕೆ ಅವರು ನಿರಾಕರಿಸಿದ್ದರಿಂದ ನಾನು ದೂರು ದಾಖಲಿಸಿದ್ದೇನೆ. ಗುರುವಾರ ಪ್ರಕರಣ ದಾಖಲಿಸಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.







