ವೈದ್ಯರ ಕೊರತೆ ನೀಗಿಸಲು ನೂತನ ಕೋರ್ಸ್ ಸಹಕಾರಿ: ಎಂ.ಎಸ್.ಭಾಟಿಯಾ
ಬೆಂಗಳೂರು, ಜು. 18: `ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಐಎಚ್‍ಎಂಆರ್ ಮತ್ತು ಕ್ಲೌಡ್ ಪಿಶಿಷಿಯನ್ ಸಹಯೋಗದೊಂದಿಗೆ `ಇಂಟಿಗ್ರೇಟೆಡ್ ಡಿಜಿಟಲ್ ಇಂಟೆನ್ಸಿವ್ ಕೇರ್ ಮ್ಯಾನೇಜ್ ಮೆಂಟ್' ನೂತನ ಕೋರ್ಸ್‍ನ್ನು ಕೇಂದ್ರ ಸರಕಾರದ ಇಎಸ್‍ಐಸಿ ಮಹಾನಿದೇರ್ಶಕ ಎಮ್.ಎಸ್.ಭಾಟಿಯಾ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಮಹಾ ನಿದೇರ್ಶಕ ಎಮ್.ಎಸ್.ಭಾಟಿಯಾ, `ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತದ ಆಸ್ಪತ್ರೆಗಳಲ್ಲಿ ಐಸಿಯು ತೀವ್ರ ನಿಗಾಘಟಕ ನಿರ್ವಹಿಸಲು ನುರಿತ ವೈದ್ಯರ ಮತ್ತು ನರ್ಸ್‍ಗಳ ಕೊರತೆ ಕಂಡು ಬಂದಿದ್ದು, ಈ ಕೊರತೆ ನೀಗಿಸಲು, ಈ ಕೋರ್ಸ್ ಪೂರಕವಾಗಿದೆ. ಇದರಿಂದ ದೇಶದ 13 ಕೋಟಿ ಇಎಸ್‍ಐ ಪಲಾನುಭವಿಗಳಿಗೆ ಗುಣಮಟ್ಟದಿಂದ ಕೂಡಿದ ಆಸ್ಪತ್ರೆಗಳಲ್ಲಿ ಐಸಿಯು ಸೇವೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ' ಎಂದು ತಿಳಿಸಿದರು.
`ಕೇಂದ್ರ ಸರಕಾರದ ಆರೋಗ್ಯ ಅಭಿಯಾನದ ನಿರ್ದೇಶಕಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ವಂದನಾ ಗುರ್ನಾನಿ ಮಾತನಾಡಿ, `ಕೊರೋನ ಸೋಂಕಿತರು ತೀವ್ರ ಗತಿಯಲ್ಲಿ ಚೇತರಿಸಿಕೊಳ್ಳಲು ಗುಣಮಟ್ಟದ ಆರೈಕೆಯ ಅವಶ್ಯಕತೆ ಇದೆ. ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲಿದೆ. ಸ್ಪಷ್ಟವಾದ ಅಂಕಿ ಸಂಖ್ಯೆಗಳ ಕಲೆ ಹಾಕುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ದತ್ತಾಂಶ ಸಂಗ್ರಹಣೆಯಲ್ಲಿ ತಂತ್ರಜ್ಞಾನದ ಅವಶ್ಯಕತೆ ಇದೆ. `ಇಂಟಿಗ್ರೇಟೆಡ್ ಡಿಜಿಟಲ್ ಇಂಟೆನ್ಸಿವ್ ಕೇರ್ ಮ್ಯಾನೇಜ್ಮೆಂಟ್' ಕೋರ್ಸ್‍ನಿಂದ ಆಸ್ಪತ್ರೆಯ ಆರೋಗ್ಯ ಸೇವೆಯ ಗುಣಮಟ್ಟ ನಿರ್ವಹಣೆ, ಸಂವಹನ, ಬೇಕಾಗುವ ಸಾಫ್ಟ್ ಸ್ಕಿಲ್ಸ್, ಮತ್ತು ತಾಂತ್ರಿಕ ಕೌಶಲ್ಯಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ' ಎಂದರು.
ರಾಜ್ಯ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ, `ನರ್ಸ್‍ಗಳು ಹಾಗೂ ವೈದ್ಯರು ತರಬೇತಿ ತರಗತಿಯಲ್ಲಿ ಉಪನ್ಯಾಸದ ಜೊತೆಗೆ ಪ್ರಾಯೋಗಿಕ ಜ್ಞಾನ, ರೋಗಿಗಳ ಅಧ್ಯಯನ, ಸಂವಾದಾತ್ಮಕ ಉಪನ್ಯಾಸಗಳನ್ನು ಈ ಕೋರ್ಸ್ ಹೊಂದಿರುವುದರಿಂದ ಇದೊಂದು ವಿಶಿಷ್ಟ ಪ್ರಯತ್ನ' ಎಂದು ಹೇಳಿದರು. ಇಲಾಖೆ ಆಯುಕ್ತ ಡಾ. ತ್ರಿಲೋಕ್ ಚಂದ್ರ ಮಾತನಾಡಿ, `ಕೊರೋನದಂತಹ ತುರ್ತು ಸಂದರ್ಭಗಳಲ್ಲಿ ನಗರ ಪ್ರದೇಶ, ಮತ್ತು ಗ್ರಾಮೀಣ ಭಾಗದಲ್ಲಿ ಚಿಕಿತ್ಸೆ ನೀಡುವಂತಹ ಕೌಶಲ್ಯವನ್ನು ಬೆಳಸಿಕೊಳ್ಳಲು, ರೋಗಿಗಳ ಚಿಕಿತ್ಸೆ ನೀಡುವ ರಿಮೋಟ್ ಮಾನಿಟರಿಂಗ್ ಅನ್ನು ಈ ಕೋರ್ಸ್ ಒಳಗೊಂಡಿದೆ' ಎಂದರು.
ಐಐಎಚ್‍ಎಂಆರ್ ಬೆಂಗಳೂರು ನಿರ್ದೇಶಕಿ ಡಾ.ಉಷಾ ಮಂಜುನಾಥ್ ಮಾತನಾಡಿ, `ಭಾರತದಲ್ಲಿ 4 ರಿಂದ 5 ಸಾವಿರ ಮಂದಿ ಮಾತ್ರ ತೀವ್ರ ನಿಗಾಘಟಕ ನಿರ್ವಹಣೆಯಲ್ಲಿ ತರಬೇತಿ ಹೊಂದಿದವರಾಗಿದ್ದು, ಕೋವಿಡ್ ತೀವ್ರತೆ ಹಿನ್ನೆಲೆಯಲ್ಲಿ ನರ್ಸ್‍ಗಳು, ಅರವಳಿಕೆ ತಜ್ಞರಿಗೆ ಐಸಿಯು ನಿರ್ವಹಣೆಯಲ್ಲಿ ಹೆಚ್ಚಿನ ನಿಪುಣತೆ ಹೊಂದಿರಬೇಕಾದ ಅವಶ್ಯತೆ ಇದೆ ಈ ಹಿನ್ನೆಲೆಯಲ್ಲಿ ಐಐಎಚ್‍ಎಂಆರ್ ಕ್ಲೌಡ್ ಪಿಶಿಷಿಯನ್ ಸಹಯೋಗದೊಂದಿಗೆ `ಇಂಟಿಗ್ರೇಟೆಡ್ ಡಿಜಿಟಲ್ ಇಂಟೆನ್ಸಿವ್ ಕೇರ್ ಮ್ಯಾನೇಜ್ಮೆಂಟ್ ಕೋರ್ಸ್' ಅನ್ನು ನೂತನವಾಗಿ ಆರಂಭಿಸುತ್ತಿದೆ. ಇದು 6 ತಿಂಗಳ ಕೋರ್ಸ್ ಆಗಿದೆ' ಎಂದು ತಿಳಿಸಿದರು.







