ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟ ಜನತಾ ಪಾರ್ಟಿ: ಸಲೀಂ ಅಹ್ಮದ್ ವ್ಯಂಗ್ಯ
ಇಂಧನ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ 'ಸೈಕಲ್ ಜಾಥಾ'

ಬೆಂಗಳೂರು, ಜು. 18: ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವತಿಯಿಂದ 'ಸೈಕಲ್ ಜಾಥಾ' ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ರವರು, ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ ಅದು ಭ್ರಷ್ಟ ಜನತಾ ಪಾರ್ಟಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರ ಕೊರೋನ ಉಪಕರಣ ಖರೀದಿಯಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ, ವಿಶ್ವಾಸವಿಲ್ಲ. ವಾಮ ಮಾರ್ಗದಿಂದ ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಮಾತನಾಡಿ, ಕೋವಿಡ್ ಲಾಕ್‍ಡೌನ್‍ನಿಂದ ಜನಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಂದರ್ಭದಲ್ಲಿ ಇಂಧನ ದರಗಳನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸಿದೆ ಎಂದು ವಾಗ್ದಾಳಿ ನಡೆಸಿದರು.
ಸೈಕಲ್ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಡಿಸಿಸಿ ಉತ್ತರ ಜಿಲ್ಲಾ ಅಧ್ಯಕ್ಷ ರಾಜಕುಮಾರ್, ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯ ಎಸ್.ಕೇಶವಮೂರ್ತಿ ಸೇರಿದಂತೆ ಪ್ರಮುಖರಿದ್ದರು.








