ಕಲ್ಲೋಳ ಬ್ಯಾರೇಜ್ ನಿರ್ಮಾಣ ಪ್ರಸ್ತಾವಕ್ಕೆ ಶೀಘ್ರ ಮಂಜೂರಾತಿ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಬೆಳಗಾವಿ, ಜು. 18: ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಹೊಸದಾಗಿ ನಿರ್ಮಿಸುವ 35 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರವಿವಾರ ಜಲಜೀವನ ಮಿಷನ್, ಬಹುಗ್ರಾಮ ಕುಡಿಯುವ ನೀರು, ಕೋವಿಡ್ ನಿಯಂತ್ರಣ ಮತ್ತಿತರ ವಿಷಯಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೂಡಲೇ 35 ಕೋಟಿ ರೂ.ವೆಚ್ಚದ ಕಲ್ಲೋಳ ಬ್ಯಾರೇಜ್ ನಿರ್ಮಾಣ ಪ್ರಸ್ತಾವಕ್ಕೆ ಮಂಜೂರಾತಿ ನೀಡುವಂತೆ ತಿಳಿಸಿದರು. ಕಲ್ಲೋಳ ಬ್ಯಾರೇಜ್ ನಿರ್ಮಾಣದಿಂದ ರಾಜಾಪುರ ಹಾಗೂ ಕಾಳಮ್ಮವಾಡಿ ಬ್ಯಾರೇಜ್ ನಿಂದ ಬಿಡುಗಡೆಯಾಗುವ ನೀರು ಸಂಗ್ರಹಕ್ಕೆ ಅನುಕೂಲವಾಗುತ್ತದೆ ಎಂದರು.
ಕಾಮಗಾರಿ ಅಕ್ಟೋಬರ್ ನಿಂದ ಆರಂಭ: ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅನುದಾನ ನೀಡುವುದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಕ್ಟೋಬರ್ ಮೊದಲ ವಾರದ ವೇಳೆಗೆ ಎಲ್ಲ ಪೂರ್ವಸಿದ್ಧತೆ ಕೈಗೊಂಡು ನಂತರ ಕಾಮಗಾರಿಗೆ ಚಾಲನೆ ನೀಡಬೇಕು. ಜಲಜೀವನ ಮಿಷನ್ ಮೂಲಕ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 8.52 ಲಕ್ಷ ಮನೆಗಳಿಗೆ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಕೇಂದ್ರ ಸರಕಾರ 2100 ಕೋಟಿ ಮಂಜೂರು ಮಾಡಿದೆ ಎಂದು ತಿಳಿಸಿದರು.
ನದಿಗಳ ಮೇಲ್ಮಟ್ಟದ ನೀರು ಬಳಕೆ ಮಾಡಿಕೊಂಡು ಜಲಜೀವನ ಮಿಷನ್ ಯೋಜನೆ ಮೂಲಕ ಎಲ್ಲ ಗ್ರಾಮಗಳ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಯೋಜನೆ ಅನುಷ್ಠಾನದ ಬಳಿಕ ವಿದ್ಯುತ್ ಬಿಲ್ ಪಾವತಿ ಕುರಿತು ಗೊಂದಲ ಉಂಟಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಮುರಗೋಡ ನೀರು ಸರಬರಾಜು ಯೋಜನೆಗೆ ಎಕ್ಸ್ ಪ್ರೆಸ್ ಫೀಡರ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಕಾರಣವಾದ ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಸಂಪರ್ಕ ಕಲ್ಪಿಸಿ ವರದಿ ಸಲ್ಲಿಸುವಂತೆ ಹಾಗೂ ಜಿಲ್ಲೆಯಲ್ಲಿ ಬಿತ್ತನೆ ಉತ್ತಮವಾಗಿದೆ. ಹೀಗಾಗಿ, ಬೀಜ-ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನುಡಿದರು.







