ಭಾರೀ ಮಳೆಗೆ ಕಾಪು, ಬೈಂದೂರಿನಲ್ಲಿ ಕೃತಕ ನೆರೆ: ಮನೆಗಳಿಗೆ ಹಾನಿ, ಹಲವು ಮಂದಿಯ ಸ್ಥಳಾಂತರ

ಉಡುಪಿ, ಜು.17: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರವಿವಾರ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ನೆರೆಯ ಭೀತಿ ಆವರಿಸಿದೆ. ಈ ಹಿನ್ನೆಲೆ ಯಲ್ಲಿ ತಗ್ಗು ಪ್ರದೇಶದ ಕೆಲವು ಮನೆಗಳ ಹಲವು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಪು ಮತ್ತು ಬೈಂದೂರು ತಾಲೂಕಿನ ಕೆಲವೆಡೆ ನೆರೆಯ ಸೃಷ್ಠಿಯಾಗಿದೆ. ಕೆಲವು ಕಡೆಗಳಲ್ಲಿ ನೀರಿನಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಲಾವೃತಗೊಂಡ ಮನೆಗಳಿಂದ ಹಲವು ಮಂದಿಯನ್ನು ಸಂಬಂಧಕರ ಮನೆಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಸ್ಥಳೀಯ ಶಾಲೆಗಳಲ್ಲಿ ಪುನರ್ ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದೇ ರೀತಿ ಕಡಲು ಕೂಡ ಪ್ರಕ್ಷುಬ್ಧಗೊಂಡಿದ್ದು, ಹಲವು ಕಡೆ ಬೃಹತ್ ಗ್ರಾತ್ರದ ಅಲೆಗಳು ತೀರಕ್ಕೆ ಬಡಿಯುತ್ತಿವೆ.
ಉಡುಪಿ ನಗರದ ಮಠದಬೆಟ್ಟು ಎಂಬಲ್ಲಿ ನೀರು ತುಂಬಿದ ಪರಿಣಾಮ ಹಲವು ಮನೆಗಳು ಜಲಾವೃತಗೊಂಡಿವೆ. ಸುತ್ತಲಿನ ಗದ್ದೆಗಳಲ್ಲಿ ನೀರು ಆವರಿಸಿ ರುವುದರಿಂದ ಕೆಲವು ಮನೆಗಳು ಸಂಪರ್ಕ ಕಡಿದುಕೊಂಡಿದೆ. ಇಲ್ಲಿನ ಇಂದ್ರಾಣಿ ನದಿ ತುಂಬಿ ಹರಿಯುತ್ತಿದ್ದು, ಇತ್ತೀಚೆಗೆ ಮುರಿದ ಕಿರು ಸೇತುವೆ ಅಪಾಯಕಾರಿಯಾಗಿದೆ.
ಮೂಡನಿಡಂಬೂರು ಬ್ರಹ್ಮಬೈದರ್ಕಳ ಗರಡಿಗೂ ನೀರು ನುಗ್ಗಿದೆ. ಒಟ್ಟಾರೆ ಈ ಪ್ರದೇಶದಲ್ಲಿ ನೆರೆಯ ಭೀತಿಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅದೇ ರೀತಿ ಕಡೆಕಾರು ಹಾಗೂ ಕಿದಿಯೂರು ಪ್ರದೇಶಗಳು ಕೂಡ ಜಲಾವೃತ ಗೊಂಡಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಗಾಳಿಮಳೆಗೆ ಉಡುಪಿ ಜಿಲ್ಲೆಯಲ್ಲಿ 13 ವಿದ್ಯುತ್ ಕಂಬಗಳು, ಒಂದು ಟ್ರಾನ್ಸ್‌ಫಾರ್ಮರ್ ಹಾಗೂ 19ಮೀಟರ್ ಉದ್ದದ ವಿದ್ಯುತ್ ತಂತಿಗೆ ಹಾನಿಯಾಗಿದ್ದು, ಒಟ್ಟು 2.39ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಬೈಂದೂರಿನ ಹಲವೆಡೆ ನೆರೆ
ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಕೃತಕ ನೆರೆ ಉಂಟಾಗಿದ್ದು, ಗದ್ದೆಗಳು ಜಲಾವೃತಗೊಂಡಿವೆ. ಕೆಲವು ಮನೆಗಳ ಒಳಗೆ ಮತ್ತು ಅಂಗಳಕ್ಕೆ ನೀರು ನುಗ್ಗಿ ಹಾನಿಯುಂಟಾಗಿದೆ.
ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸೌಪರ್ಣಿಕ ನದಿ ತೀರದ ಸಾಲ್ಬುಡಾ, ಕಂಡಿಕೇರಿ ಸಹಿತ ಸುತ್ತಮುತ್ತಲಿನ ಪರಿಸರ ಜಲಾ ವೃತಗೊಂಡಿದೆ. ಗದ್ದೆ, ಕೃಷಿ ಪ್ರದೇಶ ಸಂಪೂರ್ಣ ನೀರಿನಿಂದ ತುಂಬಿರುವುದು ಕಂಡುಬಂದಿದೆ. ಶಿರೂರು ಗ್ರಾಪಂ ವ್ಯಾಪ್ತಿಯ ನಡುಕೋಟೆ ಹಾಗೂ ಕರಾವಳಿ ಎಂಬಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಕೆಲವು ಕಡೆ ತೆಂಗಿನ ಮರ ಉರುಳಿ ಬಿದ್ದಿದೆ. ಕಳುಹಿತ್ಲು ಸೇರಿದಂತೆ ಅನೇಕ ಕಡೆ ರಸ್ತೆಗಳಲ್ಲಿ ನೀರು ತುಂಬಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿದೆ.
ಕುಂದಾಪುರ ತಾಲೂಕಿನ ಗುಜ್ಜಾಡಿ, ಗುಲ್ವಾಡಿ, ಹೊಸಾಡು, ಗೋಪಾಡಿ, ಕಾಳಾವರ, ಸೇರಿದಂತೆ ವಿವಿಧೆಡೆಗಳಲ್ಲಿ ನೆರೆ ಉಂಟಾಗಿ, ಕೃಷಿ ಬೆಳೆಗಳಿಗೆ ಹಾನಿ ಯಾಗಿರುವ ಬಗ್ಗೆ ವರದಿಯಾಗಿದೆ. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ತಾಲೂಕಿನ ನೆರೆ ಪೀಡಿತ ಪ್ರದೇಶ ಗಳಾದ ಬಿಜೂರು, ತಗ್ಗರ್ಸೆ, ನಾವುಂದ, ಕಿರಿಮಂಜೇಶ್ವರ, ಪಡುವರಿ, ಯಡ್ತರೆ, ಶಿರೂರು ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕುಂದಾಪುರ ತಾಲೂಕಿನಲ್ಲಿ ನೆರೆಗೆ ತುತ್ತಾಗುವ ಪ್ರದೇಶಗಳಾದ ಹೊಸಾಡು, ಗುಜ್ಜಾಡಿ, ಗುಲ್ವಾಡಿಯಲ್ಲಿ ಈಗಾಗಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಬೊಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯಕ್ ತಿಳಿಸಿದ್ದಾರೆ.
‘ಬೈಂದೂರು ತಾಲೂಕಿನ ಹಲವಡೆಗಳಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ತಗ್ಗರ್ಸೆಯಲ್ಲಿ ಒಂದು ಮನೆಗೆ ಸಾಕಷ್ಟು ಹಾನಿಯಾಗಿದ್ದು, ಈ ಮೊದಲೇ ಅವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು. ಶಾಲೆಗಳಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ಈವರೆಗೆ ಯಾವುದೇ ಪ್ರಾಣಹಾನಿ, ಜಾನುವಾರು ಹಾನಿ ಸಂಭವಿಸಿಲ್ಲ’
-ಶೋಭಾಲಕ್ಷ್ಮಿ, ತಹಶೀಲ್ದಾರ್, ಬೈಂದೂರು
8 ಮನೆಗಳಿಗೆ ಹಾನಿ: 3.55ಲಕ್ಷ ರೂ. ನಷ್ಟ
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ ಮೂರು ಮನೆ ಗಳಿಗೆ ಹಾನಿಯಾಗಿ ಒಟ್ಟು 1.50ಲಕ್ಷ ರೂ., ಕಾಪು ತಾಲೂಕಿನಲ್ಲಿ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು 1.05ಲಕ್ಷ ರೂ., ಬೈಂದೂರು ತಾಲೂಕಿನಲ್ಲಿ ಎರಡು ಮನೆಗಳಿಗೆ ಗಾಳಿಯಿಂದ ಮಳೆಯಿಂದ ಹಾನಿ ಯಾಗಿ ಒಟ್ಟು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಜಿಲ್ಲಾಡಳಿತ ಕಚೇರಿ ಮೂಲಗಳು ತಿಳಿಸಿವೆ.












