ಉದ್ಯೋಗ ಮೂಲಭೂತ ಹಕ್ಕಾಗಲಿ: ಆನಂದಮೋಹನ್ ಮಾಥುರ್
ಬೆಂಗಳೂರು, ಜು. 18: `ಯುವಜನತೆಗೆ ಉದ್ಯೋಗವಿಲ್ಲದೆ ತಮ್ಮ ಬದುಕನ್ನು ರೂಪಿಸಿಕೊಳ್ಳುವುದಾದರು ಹೇಗೆ. ಹೀಗಾಗಿ ದೇಶದಲ್ಲಿ ಉದ್ಯೋಗ ಒಂದು ಮೂಲಭೂತ ಹಕ್ಕಾಗಲಿ' ಎಂದು ಮಧ್ಯಪ್ರದೇಶದ ಮಾಜಿ ಅಡ್ವಕೇಟ್ ಜನರಲ್ ಆನಂದಮೋಹನ್ ಮಾಥುರ್ ಒತ್ತಾಯಿಸಿದ್ದಾರೆ.
ರವಿವಾರ ಎಐಡಿವೈಒ(ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್) ಹಾಗೂ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಆಯೋಜಿಸಿದ್ದ ಆನ್‍ಲೈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನಮ್ಮ ಸಂವಿಧಾನದ 21ನೇ ವಿಧಿಯು ವ್ಯಕ್ತಿಯ ಆಸ್ತಿತ್ವ ಮತ್ತು ಬದುಕುವ ಹಕ್ಕು ಅಮೂಲ್ಯವೆಂದು ಹೇಳುತ್ತದೆ. ಆದರೆ, ಭಾರತದಲ್ಲಿ ಲಕ್ಷಾಂತರ ಯುವಕರು ಉದ್ಯೋಗವಿಲ್ಲದೆ ಬದುಕೇ ಇಲ್ಲದೆ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೂ ನಮ್ಮ ಆಡಳಿತ ಈ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿಲ್ಲ' ಎಂದು ವಿಷಾದಿಸಿದರು.
`ಇಂದು ಕೃಷಿ ಮತ್ತು ಕಾರ್ಖಾನೆಗಳು ನೆಲ ಕಚ್ಚಿವೆ. ಕೃಷಿಕರು ಹಾಗೂ ಕಾರ್ಮಿಕರು ನಿರುದ್ಯೋಗಿಗಳಾಗಿ ಬೀದಿಗೆ ಬಿದ್ದಿದ್ದಾರೆ. ಅಲ್ಪಸಲ್ಪ ಸರಕಾರಿ ಹುದ್ದೆಗಳನ್ನು ರಾಜ್ಯ ಸರಕಾರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತಿದೆ. ಇವೆಲ್ಲ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಉದ್ಯೋಗವನ್ನು ಮೂಲಭೂತ ಹಕ್ಕೆಂದು ಘೋಷಿಸುವಂತೆ ನಾವೆಲ್ಲರೂ ದೊಡ್ಡ ಆಂದೋಲನವನ್ನು ರೂಪಿಸಬೇಕಾದ ಅಗತ್ಯವಿದೆ' ಎಂದು ಅವರು ತಿಳಿಸಿದರು.
ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, `ದೇಶದ ನಗರ, ಗ್ರಾಮಾಂತರ ಪ್ರದೇಶದಲ್ಲಿ ಯುವ ಜನತೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಪ್ರತಿ ರಾಜಕೀಯ ಪಕ್ಷಗಳು ನಿರುದ್ಯೋಗವನ್ನು ತಮ್ಮ ಚುನಾವಣೆಯಲ್ಲಿ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆಯೇ ವಿನಃ ಇಲ್ಲಿಯವರೆಗೂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಿಲ್ಲ' ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಕಳೆದ ಐದು ವರ್ಷಗಳಲ್ಲಿ 15ಸಾವಿರ ಹುದ್ದೆಗಳು ಸೃಷ್ಟಿಯಾಗಿಲ್ಲ. ಇರುವ ಉದ್ಯೋಗಗಳು ಕಳೆದುಕೊಂಡು ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಹೆಚ್ಚಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಸದ್ಯ ಸರಕಾರದ ವಿವಿಧ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿ ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಎಂ.ಉಮಾದೇವಿ, ಉಪಾಧ್ಯಕ್ಷರಾಗಿ ನಿರಂಜನ ನಾಸ್ಕರ್, ಬಿಜಯ್ ಮಲ್ಲಿಕ್, ಈ.ವಿ.ಪ್ರಕಾಶ್, ಶರಣಪ್ಪ ಉದ್ಬಾಳ್, ಕಾರ್ಯದರ್ಶಿಯಾಗಿ ಅಮರಜೀತ್‍ಕುಮಾರ್ ಆಯ್ಕೆಯಾಗಿದ್ದಾರೆಂದು ಅವರು ತಿಳಿಸಿದರು.







