ಮೊದಲ ಏಕದಿನ: ಶ್ರೀಲಂಕಾ ವಿರುದ್ಧ ಭಾರತ ಶುಭಾರಂಭ
ಧವನ್, ಕಿಶನ್ ಅರ್ಧಶತಕ

ಕೊಲಂಬೊ, ಜು.18: ನಾಯಕ ಶಿಖರ್ ಧವನ್ (ಔಟಾಗದೆ 86, 95 ಎಸೆತ)ಹಾಗೂ ಚೊಚ್ಚಲ ಪಂದ್ಯವನ್ನಾಡಿರುವ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಇಶಾನ್ ಕಿಶನ್(59, 42 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಈ ಗೆಲುವಿನ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಧವನ್ ಬಳಗವು 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 263 ರನ್ ಗುರಿ ಪಡೆದ ಭಾರತವು 36.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗೆಲ್ಲಲು ಸವಾಲಿನ ಮೊತ್ತ ಪಡೆದ ಭಾರತಕ್ಕೆ ಇನಿಂಗ್ಸ್ ಆರಂಭಿಸಿದ ನಾಯಕ ಶಿಖರ್ ಧವನ್(ಔಟಾಗದೆ 86, 95 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಪೃಥ್ವಿ ಶಾ(43, 24 ಎಸೆತ, 9 ಬೌಂಡರಿ)ಮೊದಲ ವಿಕೆಟ್ ಗೆ 58 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಶಾ ಔಟಾದ ಬಳಿಕ ನಾಯಕ ಧವನ್ ರೊಂದಿಗೆ ಕೈಜೋಡಿಸಿದ ಯುವ ಬ್ಯಾಟ್ಸ್ ಮನ್ ಕಿಶನ್ (59, 42 ಎಸೆತ, 8 ಬೌಂಡರಿ, 2 ಸಿಕ್ಸರ್)ಎರಡನೇ ವಿಕೆಟ್ ಗೆ 85 ರನ್ ಜೊತೆಯಾಟವನ್ನು ನಡೆಸಿ ಇನಿಂಗ್ಸ್ ಅನ್ನು ಮತ್ತಷ್ಟು ಭದ್ರಗೊಳಿಸಿದರು.
ಕಿಶನ್ ಅವರು ಸಂಡಕನ್ ಗೆ ವಿಕೆಟ್ ಒಪ್ಪಿಸಿದ ಬಳಿಕ ಧವನ್ ಹಾಗೂ ಮನೀಷ್ ಪಾಂಡೆ(26) ಅವರು 3ನೇ ವಿಕೆಟ್ ಗೆ 72 ರನ್ ಸೇರಿಸಿದರು. ಚೊಚ್ಚಲ ಪಂದ್ಯವನ್ನಾಡಿರುವ ಇನ್ನೋರ್ವ ಬ್ಯಾಟ್ಸ್ ಮನ್ ಸೂರ್ಯಕುಮಾರ ಯಾದವ್(ಔಟಾಗದೆ 31, 20 ಎಸೆತ ) ಅವರೊಂದಿಗೆ 4ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 48 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು.







