ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ದಂಧೆ ಹೆಚ್ಚಳ: ಕಾಂಗ್ರೆಸ್ ಆರೋಪ
ಬೆಂಗಳೂರು, ಜು. 18: `ಡ್ರಗ್ಸ್ ಪೆಡ್ಲಿಂಗ್ ದಂಧೆ ಬಿಜೆಪಿ ಪಕ್ಷದ ಉಪ ಉದ್ಯೋಗದಂತಾಗಿದೆ. ದೇಶಾದ್ಯಂತ ಡ್ರಗ್ಸ್ ಪೆಡ್ಲಿಂಗ್ ಆರೋಪದಲ್ಲಿ ಬಂಧಿತರಾದ ಬಿಜೆಪಿಗರೇ ಅದಕ್ಕೆ ಸಾಕ್ಷಿ. ಡ್ರಗ್ಸ್ ದಂಧೆಯ ದೊಡ್ಡ ಕುಳಗಳಿಂದ ಬಿಜೆಪಿ ಪಾರ್ಟಿ ಫಂಡ್ ಪಡೆಯುತ್ತಿರುವ ಶಂಕೆಯೂ ಇದೆ. ಹೀಗಾಗಿಯೇ ಈ ಸರಕಾರ ಬಂದಮೇಲೆ ರಾಜ್ಯದಲ್ಲಿ ಡ್ರಗ್ಸ್ ದಂಧೆ ಹೆಚ್ಚಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ದೇಶದಾದ್ಯಂತ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದ ಅತಿ ಹೆಚ್ಚು ಆರೋಪಿಗಳು ನಿಮ್ಮದೇ ಪಕ್ಷದವರು, ಮತ್ತೊಮ್ಮೆ ಅವರೆಲ್ಲರ ಪಟ್ಟಿ ಕೊಡಬೇಕೆ? ಆರೋಪಿ ನಟಿಯನ್ನು ರಕ್ಷಿಸಲು ಪೊಲೀಸರ ಮೇಲೆ ಒತ್ತಡ ಹಾಕಲು ಯತ್ನಿಸಿದ್ದು ನಿಮ್ಮದೇ ಸರ್ಕಾರದ ಸಚಿವರಲ್ಲವೇ? ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವರು ನೀವಲ್ಲವೇ? ಎಂದು ಹೇಳಿದೆ.
`ಡ್ರಗ್ಸ್ ದಂಧೆಯಲ್ಲಿ ತೊಡಗಿದ ಉದ್ಯೋಗ ವಂಚಿತರು' ಈ ಸುದ್ದಿ ಬಿಜೆಪಿ ಸರಕಾರದ ಎರಡು ವೈಫಲ್ಯಗಳಿಗೆ ಕನ್ನಡಿ ಹಿಡಿದಿದೆ.ಬಿಜೆಪಿಯ ಅತಿಕೆಟ್ಟ ಆಡಳಿತದಿಂದ ಉದ್ಯೋಗ ಕಳೆದುಕೊಂಡ ಯುವಜನರ ಬದುಕು & ಭವಿಷ್ಯಕ್ಕೆ ಕತ್ತಲೆ ಆವರಿಸಿದೆ. ರಾಜ್ಯದಲ್ಲಿ ಕ್ರೈಮ್ ಹಾಗೂ ಡ್ರಗ್ಸ್ ದಂಧೆ ತಡೆಗಟ್ಟುವಲ್ಲಿ ವಿಫಲವಾಗಿದೆ ಈ ಅಸಮರ್ಥ ಸರಕಾರ'
ಡ್ರಗ್ಸ್ ದಂಧೆಗೆ ಆಸ್ಪದ ನೀಡಿದ್ದೇ ಕಾಂಗ್ರೆಸ್: ಬಿಜೆಪಿ
ಸರಕಾರವನ್ನು ಕಾಂಗ್ರೆಸ್ ಸಕಾರಣವಿಲ್ಲದೆ ದೂಷಿಸುತ್ತಿದೆ. ಆದರೆ, ಇದೇ ಕಾಂಗ್ರೆಸ್ ಮಾದಕ ವಸ್ತುಗಳ ನಶೆಯಿಂದ ಅಮಾಯಕನಿಗೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯನ್ನು ಯುವ ಜನತೆಯ ಭಾಗವಹಿಸುವಿಕೆ ಇರುವ ಪಕ್ಷದ ಘಟಕದ ರಾಜ್ಯ ಘಟಕಕ್ಕೆ ಮುಂದಿನ ಅಧ್ಯಕ್ಷನನ್ನಾಗಿ ನೇಮಿಸಿದೆ' ಎಂದು ಬಿಜೆಪಿ ಆರೋಪಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಉದ್ಯೋಗ ನಿಮಿತ್ತವಾಗಿ ಯಾರೂ ಕೂಡ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದನ್ನು ಯಾವುದೇ ಸರ್ಕಾರಗಳು ಪ್ರೋತ್ಸಾಹಿಸುವುದಿಲ್ಲ. ಆದರೆ ರೋಗಗ್ರಸ್ಥ ಕಾಂಗ್ರೆಸ್ ಇದನ್ನೂ ಸರಕಾರದ ತಲೆಗೆ ಕಟ್ಟುತ್ತಿದೆ. ಆದರೆ, ರಾಜ್ಯದಲ್ಲಿ ಡ್ರಗ್ಸ್ ಚಟುವಟಿಕೆಗೆ ಆಸ್ಪದ ನೀಡಿದ್ದೇ ಕಾಂಗ್ರೆಸ್ ಎಂಬುದನ್ನು ಅವರು ಮರೆತಿದ್ದಾರೆ' ಎಂದು ದೂರಿದೆ.