ಬೆಂಗಳೂರು: ಮ್ಯಾನುಯಲ್ ಸ್ಕ್ಯಾವೆಂಜರ್ಸ್‍ಗೆ ಜೀವನೋಪಾಯಕ್ಕೆ ನಿಯಮ ರಚಿಸಿ
ಸಫಾಯಿ ಕರ್ಮಚಾರಿ ಆಯೋಗದಿಂದ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು, ಜು. 18: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್‍ಗಳ ಯಾವುದೇ ಉದ್ಯೋಗ ವಿಲ್ಲದೆ ನಿರಾಶ್ರಿತರಾಗಿದ್ದು, ಅವರ ಜೀವನೋಪಾಯಕ್ಕಾಗಿ ನಗರದಲ್ಲಿ ಹಾಲಿನ ಬೂತ್, ಹಾಪ್ ಕಾಮ್ಸ್ ಸೇರಿದಂತೆ ಮತ್ತಿತರ ವ್ಯವಸ್ಥೆಯನ್ನು ಖಾಯಂ ವೃತ್ತಿಪರ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಕೂಡಲೇ ಪಾಲಿಸಿ ರಚಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ. ಪಿ.ಪಿ.ವಾವ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದಂತೆ ನಗರದ ಕುಮಾರ ಕೃಪಾ ಅತಿಥಿಗೃಹದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳು ಒಳಚರಂಡಿ, ಮಲವಿಸರ್ಜನೆ ಗುಂಡಿಗಳಲ್ಲಿ ಇಳಿಯಬಾರದೆಂದು ಕೇಂದ್ರ ಸರಕಾರ ನಿಷೇಧವೇರಿದೆ. ಈ ಸಂಬಂಧ ಕೆಲಸ ಕಳೆದುಕೊಂಡಿರುವ ಅವರಿಗೆ ಖಾಯಂ ನೌಕರಿ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 17ಸಾವಿರ ರೂ.ನೇರ ವೇತನದಡಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಪೌರಕಾರ್ಮಿಕರನ್ನು ಹೊರತು ಪಡಿಸಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆಯಿಂದ ನೇರ ವೇತನ ವ್ಯವಸ್ಥೆಯಡಿ ತಿಂಗಳ 7ನೇ ತಾರೀಖಿನ ವೇಳೆಗೆ ವೇತನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಪೌರಕಾರ್ಮಿಕರಿಗೂ ಒಂದೇ ರೀತಿಯ ಸಮವಸ್ತ್ರವನ್ನು ನೀಡಲಾಗಿದ್ದು, ಸುರಕ್ಷಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಜೊತೆಗೆ ಪೌರಕಾರ್ಮಿಕರ ಕಾಲೋನಿಗಳಲ್ಲಿ ಆಗಿಂದಾಗ್ಗೆ ಸೋಂಕುನಿವಾರಕ ಸಿಂಪಡಣೆ ಹಾಗೂ ಮೂರು ತಿಂಗಳಿಗೊಮ್ಮೆ ಹೆಲ್ತ್ ಕ್ಯಾಂಪ್ ಮಾಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಕೆಲಸದ ಅವಧಿಯಲ್ಲಿ ಮೃತಪಟ್ಟವರಿಗೆ ಅವರ ಅವಲಂಬಿತರಿಗೆ 10 ಲಕ್ಷ ರೂ.ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವೇಳೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಮಾಜಿ ಸದಸ್ಯ ಜಗದೀಶ್, ವಿಶೇಷ ಆಯುಕ್ತರುಗಳಾದ ಹರೀಶ್ ಕುಮಾರ್, ರವೀಂದ್ರ, ಜಂಟಿ ಆಯುಕ್ತರು(ಘನತ್ಯಾಜ್ಯ) ಸರ್ಫರಾಜ್ ಖಾನ್, ಅಧೀಕ್ಷಕ ಎಂಜಿನಿಯರ್(ಘನತ್ಯಾಜ್ಯ) ಬಸವರಾಜ್ ಕಬಾಡೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.







