ಸ್ಪೇನ್ ನಲ್ಲಿ ಭೀಕರ ಕಾಡ್ಗಿಚ್ಚು: 350ಕ್ಕೂ ಅಧಿಕ ಜನರ ಸ್ಥಳಾಂತರ
"ಒಂದು ಸಿಗರೇಟ್ ತುಂಡು 50 ವರ್ಷಗಳ ಕಾಡನ್ನು ನಾಶಗೊಳಿಸಿದೆ" ಎಂದ ಅಧಿಕಾರಿಗಳು

ಸಾಂದರ್ಭಿಕ ಚಿತ್ರ
ಬಾರ್ಸೆಲೋನಾ, ಜು.18: ಸ್ಪೇನ್ನ ಕೋಸ್ಟಬ್ರೇವ ಪ್ರದೇಶದಲ್ಲಿ ಸಂಭವಿಸಿರುವ ಭೀಕರ ಕಾಡ್ಗಿಚ್ಚನ್ನು ಹತೋಟಿಗೆ ತರಲು ಪ್ರಯತ್ನ ಮುಂದುವರಿದಿರುವಂತೆಯೇ 350ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕ್ಯಾಪ್ಡೆ ಕ್ರೆಯಸ್ ಅಭಯಾರಣ್ಯದ ಬಳಿಯ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು ಸಿಗರೇಟು ಸೇದಿ ಎಸೆದ ತುಂಡಿನಿಂದ ಬೆಂಕಿ ವ್ಯಾಪಿಸಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. 6 ವಿಮಾನಗಳ ಮೂಲಕ ನೀರು ಸುರಿಸುವ ಮತ್ತು 90 ಅಗ್ನಿಶಾಮಕ ಯಂತ್ರಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ .
ಬೆಂಕಿಯಿಂದ ಸುಮಾರು 400 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ ಪೋರ್ಟೆಡೆ ಲಸೆಲ್ವಾ ಜಿಲ್ಲೆಯಲ್ಲಿ ಸ್ಥಳೀಯ ಸಮಿತಿ ನಿರ್ಮಿಸಿರುವ ತಾತ್ಕಾಲಿಕ ಶಿಬಿರದಲ್ಲಿ 231ಕ್ಕೂ ಅಧಿಕ ಜನ ಆಶ್ರಯ ಪಡೆದಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣವಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರ್ಲಕ್ಷ್ಯದಿಂದ ಬಿಸಾಡಿದ ಒಂದು ತುಂಡು ಸಿಗರೇಟು 50 ವರ್ಷದಿಂದ ನೆಟ್ಟು ಬೆಳೆಸಿದ ಕಾಡನ್ನು ಧ್ವಂಸಗೊಳಿಸಿದೆ ಎಂದು ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಜೋರ್ಡಿ ಪ್ಯುಗ್ನೆರೊ ಪ್ರತಿಕ್ರಿಯಿಸಿದ್ದಾರೆ.







