"ಈಶ್ವರಪ್ಪ, ಜಗದೀಶ್ ಶೆಟ್ಟರ್ ತಂಡವನ್ನು ತೆಗೆಯುತ್ತಾರೆ, ಮೂರು ಜನರಲ್ಲಿ ಯಾರು ಬೇಕಾದರೂ ಆಗಬಹುದು"
ಸಿಎಂ ಬದಲಾವಣೆ ಚರ್ಚೆ ನಡುವೆ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ವೈರಲ್

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಎನ್ನುವ ಚರ್ಚೆಗಳ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಳಿನ್ ಅವರದ್ದು ಎನ್ನಲಾದ ಆಡಿಯೋದಲ್ಲಿ "ಯಾರಿಗೂ ಹೇಳಬೇಡ. ಈಶ್ವರಪ್ಪ , ಜಗದೀಶ್ ಶೆಟ್ಟರ್ ಟೀಮನ್ನೇ ತೆಗೆಯುತ್ತಾರೆ. ಹೊಸ ತಂಡ ಕಟ್ಟಲಾಗುತ್ತಿದೆ. ಏನೂ ಸಮಸ್ಯೆಯಿಲ್ಲ. ಹೆದರಬೇಡ. ಇನ್ನು ನಮ್ಮ ಕೈಯಲ್ಲೇ... ಮೂರು ಹೆಸರುಗಳಿವೆ, ಯಾರೂ ಬೇಕಾದರೂ ಆಗಬಹುದು" ಎನ್ನುವುದು ಕೇಳಿಸುತ್ತದೆ.
ಮೂರು ಹೆಸರಿದೆ, ಯಾರು ಬೇಕಾದರೂ ಆಗಬಹುದು ಎನ್ನುವುದು ಮುಖ್ಯಮಂತ್ರಿ ಬದಲಾವಣೆಯ ಕುರಿತಾಗಿಯೇ ಎನ್ನುವ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಮತ್ತೊಂದೆಡೆ ಈಶ್ವರಪ್ಪ, ಜಗದೀಶ್ ಶೆಟ್ಟರ್ ತಂಡವನ್ನು ತೆಗೆಯುತ್ತಾರೆ ಎನ್ನುವ ಮಾತು ಕೂಡ ಕುತೂಹಲಕ್ಕೆ ಕಾರಣವಾಗಿದೆ.
'ಧ್ವನಿ ನನ್ನದಲ್ಲ'
ವೈರಲ್ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಅವರು, " ಆ ಧ್ವನಿ ನನ್ನದಲ್ಲ, ಈ ಬಗ್ಗೆ ತನಿಖೆ ನಡೆಸಲು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.







