ಕೋವಿಡ್ ಅವಧಿ ವಿಶೇಷವಾಗಿ ಪರಿಗಣಿಸಿ; ಶಿಕ್ಷಣ, ಉದ್ಯೋಗದಲ್ಲಿ ಪ್ರೋತ್ಸಾಹ ನೀಡಿ: ದಸಂಸ ಒಕ್ಕೂಟ-ರೈತ ಸಂಘ ಒತ್ತಾಯ
ಬೆಂಗಳೂರು, ಜು. 18: ಕೋವಿಡ್ ಸಂದರ್ಭವನ್ನು ವಿಶೇಷವಾಗಿ ಪರಿಗಣಿಸಿ ಕಳೆದೆರಡು ವರ್ಷಗಳಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಹಾಗೂ ಖಾಸಗಿ, ಸರಕಾರಿ ಉದ್ಯೋಗದಲ್ಲಿ ವಿಶೇಷ ಪ್ರೋತ್ಸಾಹ ನೀಡಬೇಕೆಂದು ದಸಂಸ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಒಕ್ಕೂಟ, ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳ ಶಾಲೆಗಳಲ್ಲಿ ಬೋಧನಾ ವ್ಯವಸ್ಥೆ ಏರುಪೇರಾಗಿದೆ. ಮುಖ್ಯವಾಗಿ ಎಸೆಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಅಂತಹ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಹಾಗೂ ಔದ್ಯೋಗಿಕ ದೃಷ್ಟಿಯಿಂದ ವಿಶೇಷ ಪ್ರೋತ್ಸಾಹ ನೀಡುವುದು ಅಗತ್ಯವಿದೆಯೆಂದು ಅಭಿಪ್ರಾಯಿಸಿದೆ.
ಕಳೆದ ಎರಡು ವರ್ಷಗಳ ಕಲಿಕೆಯ ಹಿನ್ನಡೆಗಳು ಹಾಗೂ ಬರಲಿರುವ ಪರೀಕ್ಷೆಯ ಫಲಿತಾಂಶಗಳು, ಅಂಕಗಳು ಅನುಕೂಲಸ್ಥ ಹಾಗೂ ಬಡ ವಿದ್ಯಾರ್ಥಿಗಳ ನಡುವೆ ದೊಡ್ಡ ಕಂದಕಗಳನ್ನು ಸೃಷ್ಟಿಸುವ ಅಪಾಯವಿದೆ. ಇವೆಲ್ಲವನ್ನು ವಸ್ತುನಿಷ್ಟವಾಗಿ ಅರ್ಥೈಸಿಕೊಂಡು ಬಡ ಸಮುದಾಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ದಸಂಸ ಒಕ್ಕೂಟದ ಪರವಾಗಿ ಗುರುಪ್ರಸಾದ್ ಕೆರಗೋಡು, ರೈತ ಸಮುದಾಯದ ಪರವಾಗಿ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.





