ಜುಲೈ19ರಿಂದ ಸರಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು. 18: `ಕೊರೋನ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದ ಸರಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯ್ತಿ ನೀಡಲಾಗಿತ್ತು. ಆದರೆ, ಇದೀಗ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ನಾಳೆ(ಜು.19) ಯಿಂದ ರಾಜ್ಯ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ' ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಸುತ್ತೋಲೆ ಹೊರಡಿಸಿದ್ದು, `ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿರುವುದರಿಂದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜು.19ರಿಂದ ಪುನರಾರಂಭಿಸಲಾಗಿದೆ. ಹೀಗಾಗಿ ಸಚಿವಾಲಯ ಮತ್ತು ರಾಜ್ಯದ ಎಲ್ಲ ಇಲಾಖಾ ಕಚೇರಿಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಯಂತ್ರದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಮ್ಮ ಹಾಜರಾತಿಯನ್ನು ದಾಖಲಿಸುವುದು. ಆರೋಗ್ಯದ ಹಿತದೃಷ್ಠಿಯಿಂದ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು' ಎಂದು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.





