ಛತ್ತೀಸ್ ಗಢ: ಕ್ರಿಶ್ಚಿಯನ್ ಮತ ಪ್ರಚಾರಕರ ಬಗ್ಗೆ ನಿಗಾ ವಹಿಸಿ; ಪೊಲೀಸ್ ಅಧೀಕ್ಷಕರ ಸುತ್ತೋಲೆಗೆ ವ್ಯಾಪಕ ಖಂಡನೆ

ರಾಯ್ಪುರ, ಜು.18: ಕ್ರಿಶ್ಚಿಯನ್ ಮತಪ್ರಚಾರಕರ ಚಟುವಟಿಕೆ ಬಗ್ಗೆ ನಿಗಾ ವಹಿಸುವಂತೆ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಪೊಲೀಸ್ ಅಧೀಕ್ಷಕರು ನೀಡಿರುವ ಸೂಚನೆಯ ಬಗ್ಗೆ ಛತ್ತೀಸ್ಗಢದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸುಕ್ಮಾ ಜಿಲ್ಲೆಗೆ ನೂತನವಾಗಿ ನೇಮಕವಾಗಿರುವ ಪೊಲೀಸ್ ಅಧೀಕ್ಷಕ ಸುನಿಲ್ ಶರ್ಮ ಈ ನೋಟಿಸ್ ನೀಡಿದ್ದಾರೆ. ಜಿಲ್ಲೆಯಲ್ಲಿ ಕ್ರೈಸ್ತ ಮತಪ್ರಚಾರಕರ ಚಟುವಟಿಕೆ ಬಗ್ಗೆ ಜಿಲ್ಲಾ ವ್ಯಾಪ್ತಿಯ ಠಾಣೆಯ ಅಧಿಕಾರಿಗಳು, ಸಿಬಂದಿಗಳು ತೀವ್ರ ನಿಗಾ ವಹಿಸಬೇಕಾಗಿದೆ. ಕ್ರೈಸ್ತ ಮತಪ್ರಚಾರಕರು ಹಾಗೂ ಮತಾಂತರಗೊಂಡ ಆದಿವಾಸಿಗಳು ಗ್ರಾಮೀಣ ಪ್ರದೇಶಗಳಿಗೆ ನಿರಂತರ ಪ್ರಯಾಣಿಸುತ್ತಾ ಸ್ಥಳೀಯ ಆದಿವಾಸಿಗಳಿಗೆ ಆಮಿಷವೊಡ್ಡಿ ಕ್ರೈಸ್ತ ಮತಕ್ಕೆ ಮತಾಂತರಗೊಳ್ಳಲು ಪ್ರಚೋದಿಸುತ್ತಿದ್ದಾರೆ. ಈ ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ತಕ್ಷಣದಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
2000ರ ನವೆಂಬರ್ 1ರಂದು ರಚನೆಗೊಂಡ ಛತ್ತೀಸ್ಗಢದಲ್ಲಿ 15 ವರ್ಷ ಬಿಜೆಪಿ ಸರಕಾರದ ಆಡಳಿತವಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿ ಹಲವು ವಿವಾದಾತ್ಮಕ ಕಾನೂನುಗಳನ್ನು ಜಾರಿಗೊಳಿಸಲಾಗಿದ್ದು ಇದು ರಾಜ್ಯದಲ್ಲಿ ಧಾರ್ಮಿಕ ಉದ್ವಿಗ್ನತೆಯ ಪರಿಸ್ಥಿತಿ ನೆಲೆಸಲು ಕಾರಣವಾಗಿದೆ. ಮಧ್ಯಪ್ರದೇಶದಿಂದ ಸ್ವತಂತ್ರಗೊಂಡು ನೂತನ ರಾಜ್ಯವಾಗಿ ಉದಿಸಿದ ಛತ್ತೀಸ್ ಗಢ, ಮಧ್ಯಪ್ರದೇಶದಲ್ಲಿ ಜಾರಿಯಲ್ಲಿದ್ದ ಮತಾಂತರ ವಿರೋಧಿ ಕಾಯ್ದೆಯನ್ನು ‘ಛತ್ತೀಸ್ ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1968’ ಎಂಬ ಹೆಸರಿನಲ್ಲಿ ಅಂಗೀಕರಿಸಲಾಗಿದೆ. 2006ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಕಠಿಣ ನಿಯಮಗಳನ್ನು ಸೇರಿಸಲಾಗಿದೆ. 2001ರ ಜನಗಣತಿ ಪ್ರಕಾರ, ಛತ್ತೀಸ್ಗಢ ಜನಸಂಖ್ಯೆಯ 31.8%ದಷ್ಟು ಪರಿಶಿಷ್ಟ ಜನಾಂಗದವರು. ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳು ಹಾಗೂ ಕ್ರಿಶ್ಚಿಯನ್ನರು ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ‘ಮರಳಿ ಮನೆಗೆ’ ಅಭಿಯಾನವನ್ನು ಬಿಜೆಪಿ ಮತ್ತು ವಿಶ್ವಹಿಂದು ಪರಿಷದ್ ಆಯೋಜಿಸುತ್ತಿದೆ.
ಮತಾಂತರಗೊಂಡ ಆದಿವಾಸಿಗಳನ್ನು (ಇದರಲ್ಲಿ ಹಲವರು ತಮ್ಮಿಷ್ಟದಂತೆ ಮತಾಂತರಗೊಂಡಿದ್ದರೂ) ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಅಭಿಯಾನ ಈ ಹಿಂದೆ ಬಿಜೆಪಿ ಮುಖಂಡ ಹಾಗೂ ಸಂಸದ ದಿಲೀಪ್ ಸಿಂಗ್ ಜುದೇವ್ ನೇತೃತ್ವದಲ್ಲಿ ನಡೆದಿತ್ತು. ದೇಶದ ಉಳಿದೆಡೆ ಚಾಲ್ತಿಯಲ್ಲಿರುವ ಹಿಂದು ರಾಷ್ಟ್ರ ಪರಿಕಲ್ಪನೆಯ ಸಣ್ಣಮಟ್ಟದ ಅಭಿವ್ಯಕ್ತಿ ಛತ್ತೀಸ್ಗಢದಲ್ಲಿ ಮುಂದುವರಿದಿದೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ರಾಜ್ಯಾಧ್ಯಕ್ಷ ಡಿಗ್ರೀಪ್ರಸಾದ್ ಚೌಹಾಣ್ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.
ಆದರೆ ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯದ ಧೋರಣೆ ಹೊಂದಿರುವುದು ಆಶ್ಚರ್ಯದ ವಿಷಯವಾಗಿದೆ. ಎಲ್ಲಾ ಚುನಾಯಿತ ಸರಕಾರಗಳೂ ಒಂದು ಧರ್ಮದ ನಿಲುವನ್ನು ಮಾತ್ರ ಬೆಂಬಲಿಸುತ್ತವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್ ಕೂಡಾ ಮಂದಿರ ನಿರ್ಮಾಣಕ್ಕೆ ಅನುದಾನ ಒದಗಿಸುವುದು, ಹಿಂದು ಆಚರಣೆಗಳಿಗೆ ಪ್ರೋತ್ಸಾಹ ನೀಡುವುದನ್ನು ಮುಂದುವರಿಸಿದೆ ಎಂದವರು ಹೇಳಿದ್ದಾರೆ.
ಭೂಪೇಶ್ ಬಾಘೆಲ್ ನೇತೃತ್ವದ ರಾಜ್ಯ ಸರಕಾರ ನಕ್ಸಲ್ ಬಾಧಿತ ಬಸ್ತಾರ್ ಮತ್ತು ಸುಕ್ಮಾ ಜಿಲ್ಲೆಗಳಲ್ಲಿ ಶಿವ ಮತ್ತು ರಾಮ ದೇವಾಲಯ ನಿರ್ಮಿಸುವುದಾಗಿ ಘೋಷಿಸಿದೆ. ಅಲ್ಲದೆ ಗೋರಕ್ಷಣೆ ಹಾಗೂ ಗೋವಿನ ಸೆಗಣಿ ಖರೀದಿ ಯೋಜನೆಗೆ ಮತ್ತು ಚಂಡ್ಖುರಿಯಲ್ಲಿ ಕೌಶಲ್ಯ ದೇವಸ್ಥಾನ ನಿರ್ಮಾಣ ಯೋಜನೆಗೆ 15 ಕೋಟಿ ಅನುದಾನ ಒದಗಿಸುವುದಾಗಿ ಘೋಷಿಸಿದೆ ಎಂದವರು ಹೇಳಿದ್ದಾರೆ.
ಛತ್ತೀಸ್ಗಢದ ಬಸ್ತಾರ್ ಪ್ರದೇಶದಲ್ಲಿ ಕೆಲವು ರಾಜಕೀಯ ಪಕ್ಷಗಳು ನಿರಂತರ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಆದಿವಾಸಿಗಳು ಧರ್ಮ ಮುಕ್ತ ಸಮಾಜಕ್ಕೆ ಸೇರಿದವರು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ಒಂದು ನಿರ್ಧಿಷ್ಟ ಸಮುದಾಯ ಅವರನ್ನು ಹಿಂದೂಗಳೆಂದು ಘೋಷಿಸಲು ಯಾಕೆ ಪ್ರಯತ್ನಿಸುತ್ತಿದೆ? ಎಂದು ಛತ್ತೀಸ್ಗಢ ಕ್ರಿಶ್ಚಿಯನ್ ವೇದಿಕೆಯ ಛತ್ತೀಸ್ಗಢ ವಿಭಾಗದ ಅಧ್ಯಕ್ಷ ಅರುಣ್ ಪನ್ನಾಲಾಲ್ ಪ್ರಶ್ನಿಸಿದ್ದಾರೆ.







