ನಾನು ಬಿಜೆಪಿ ಕಾರ್ಯಕರ್ತ, ನನಗೆ ಹಿಂದೂ ಸಮಾಜ, ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಇದೆ: ಸಚಿವ ಕೆ.ಎಸ್.ಈಶ್ವರಪ್ಪ
'ರಾಜಕಾರಣದಲ್ಲಿ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ'

ಶಿವಮೊಗ್ಗ : ನಾನು ಬಿಜೆಪಿ ಕಾರ್ಯಕರ್ತ, ನನಗೆ ಹಿಂದೂ ಸಮಾಜ, ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಇದೆ. ದೇಶ ಹಾಗೂ ಸಮಾಜದ ಬಗ್ಗೆ ಹಿಂದಿನಿಂದಲೂ ಹೋರಾಡುತ್ತಿದ್ದೇನೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ. ಮಂತ್ರಿ ಸ್ಥಾನ ಹೋದರೆ ಗೂಟ ಹೋಯಿತು ಎಂದುಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಂಎಲ್ ಎ ಆಗುವಾಗ ಹಿರಿಯರೇ ಟಿಕೆಟ್ ನೀಡಿದ್ದರು. ಇಲಾಖೆ ಸಚಿವನಾದಾಗಲೂ ಪಕ್ಷ ಹಾಗೂ ಸಂಘಟನೆ ಹೇಳಿದಂತೆ ಕೇಳಿದ್ದೇನೆ. ನಾನು ಮಂತ್ರಿ ಸ್ಥಾನವನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ದೇವೇಗೌಡರ ವಿರುದ್ಧ ಕನಕಪುರದಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಗೆ ರಾಜೀನಾಮೆ ನೀಡಿದ್ದೆ. ಆಡಳಿತದಲ್ಲಿ ಯುವಕರಿಗೆ ಪ್ರಾಧಾನ್ಯತೆ ನೀಡಲು ಪಕ್ಷ ತೀರ್ಮಾನಿಸಿದೆ ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.
ನಳಿನ್ ಕುಮಾರ್ ಅವರು ಆಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಯಾರೋ ಹುಚ್ಚರು ಹೀಗೆ ಮಾಡಿದ್ದಾರೆ. ಯಾರೋ ಆಡಿಯೋ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ಅಗತ್ಯವಿಲ್ಲ. ಆಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು. ಹಿಂದೂ ಸಮಾಜ ಹಾಗೂ ದೇಶಕ್ಕಾಗಿ ಉಸಿರಿರುವವರೆಗೆ ಹೋರಾಡುತ್ತೇನೆ ಎಂದು ಹೇಳಿದರು.







