ಉಳ್ಳಾಲ : ಎಸೆಸೆಲ್ಸಿ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಬೆಂಕಿ ಆಕಸ್ಮಿಕ

ಮಂಗಳೂರು: ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕೇಂದ್ರದ ಕೊಠಡಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಉಳ್ಳಾಲ ಸಮೀಪದ ಬಬ್ಬುಕಟ್ಟೆ ಹಿರಾ ಸ್ಕೂಲ್ ನಲ್ಲಿ ನಡೆದಿದೆ.
ಶಾಲೆಯ ಲ್ಯಾಬ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ತಕ್ಷಣ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳನ್ನು ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ.
ಉಳ್ಳಾಲ ಠಾಣೆ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
''ಕೊರೋನ ಹಿನ್ನೆಲೆಯಲ್ಲಿ ಶಾಲೆ ಮುಚ್ಚಲಾಗಿತ್ತು. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭಗೊಂಡ ಹಿನ್ನೆಲೆಯಲ್ಲಿ ಸೋಮವಾರ ಶಾಲೆ ತೆರೆದಾಗ ಲ್ಯಾಬ್ ಟೆಕ್ನಿಷಿಯನ್ ವಸ್ತುಗಳು ಇಡುವ ಫ್ರಿಡ್ಜ್ ಸುಟ್ಟು ಹೋದದ್ದು ಬೆಳಕಿಗೆ ಬಂದಿದೆ. ಅಗತ್ಯ ಸಾಮಗ್ರಿಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕುಡಿದು ಹೋಗಿದ್ದು, ಇದರಿಂದ ಸುಮಾರು ಹತ್ತು ಲಕ್ಷ ರೂ. ನಷ್ಟ ಸಂಭವಿಸಿದೆ''
- ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ, ಹಿರಾ ಸ್ಕೂಲ್, ಬಬ್ಬುಕಟ್ಟೆ
















