ಯಡಿಯೂರಪ್ಪರನ್ನು ಬದಲಾವಣೆ ಮಾಡಿದರೆ ಬಿಜೆಪಿ ಇತಿಹಾಸ ಮುಗಿದಂತೆ: ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ

ಬೆಂಗಳೂರು, ಜು. 19: ರಾಜ್ಯದಲ್ಲಿ `ನಾಯಕತ್ವ ಬದಲಾವಣೆ' ಚರ್ಚೆ ಬೆನ್ನಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸೋಮವಾರ ಸಂಜೆ ಉಭಯ ನಾಯಕರು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಈ ಮಧ್ಯೆ ಟ್ವೀಟ್ ಮಾಡಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್, `ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕ. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಟರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಬಿಎಸ್‍ವೈ ಅವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭೋಜನಕೂಟ: ಈ ಬೆಳವಣಿಗೆಗಳ ಮಧ್ಯೆ ಸೋಮವಾರ ಮಧ್ಯಾಹ್ನ ನಗರದ ಖಾಸಗಿ ಹೊಟೇಲ್‍ನಲ್ಲಿ ತಮ್ಮ ಆಪ್ತ ಸಚಿವರು ಹಾಗೂ ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಔತಣಕೂಟವನ್ನು ಏರ್ಪಡಿಸಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕರಾದ ಎಂ.ಕೃಷ್ಣಪ್ಪ, ಸತೀಶ್ ರೆಡ್ಡಿ ಸಹಿತ ಇನ್ನಿತರೊಂದಿಗೆ ಸಿಎಂ ಊಟ ಮಾಡಿದ್ದಾರೆಂದು ಗೊತ್ತಾಗಿದೆ.
ಈ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬಲಿದೆ. ಇದೇ ಜು.25 ಅಥವಾ 26ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್‍ಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಬಿಜೆಪಿಯಲ್ಲಿನ ದಿಢೀರ್ ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕೀಯ ಕುತೂಹಲ ಮೂಡಿಸಿದೆ.
ಬಿಜೆಪಿ ಇತಿಹಾಸ ಮುಗಿದಂತೆ
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ ಬಿಜೆಪಿ ಇತಿಹಾಸ ಮುಗಿದಂತೆ. ಬಿಎಸ್‍ವೈ ಸಿಎಂ ಆಗಿ ಮುಂದುವರೆಯಬೇಕು. ಇಡೀ ಲಿಂಗಾಯತ ಸಮುದಾಯ ಅವರ ಬೆನ್ನಿಗಿದೆ'
-ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ







