ದೇವಸ್ಥಾನಗಳಲ್ಲಿ ಅನ್ನದಾಸೋಹ ನಡೆಸಲು ಶೀಘ್ರ ನಿರ್ಧಾರ: ಸಚಿವ ಕೋಟ

ಕುಂದಾಪುರ, ಜು.19: ದೇವಸ್ಥಾನಗಳು ಈಗಾಗಲೇ ಭಕ್ತರಿಗೆ ಮುಕ್ತವಾಗಿವೆ. ದೂರದಿಂದ ಭರುವ ಭಕ್ತರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಸೀಮಿತ ಭಕ್ತರಿಗೆ ದೇವಾಲಯದಲ್ಲಿ ಅನ್ನದಾಸೋಹ ನಡೆಸಲು ಚರ್ಚಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ತೀರ್ಮಾನ ತಗೆದುಕೊಳ್ಳಲಾಗುವುದು ಎಂದು ಹಿಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಈ ಆಡಿಯೋದಲ್ಲಿನ ಸ್ವರದ ಬಗ್ಗೆ ಸಂಶಯ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು. ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಕುಂದಾಪುರ ಕಾಳವರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ದೇವಸ್ಥಾನಗಳ ಮೇಳಗಳ ಕಲಾವಿದರಿಗೆ ಪೂರ್ಣ ಸಂಭಾವನೆ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಬಹುತೇಕ ದೇವಸ್ಥಾನಗಳಲ್ಲಿ ಈಗಾಗಲೇ ವೇತನ ಪಾವತಿ ಮಾಡಲಾಗಿದೆ. ಮಾರಣಕಟ್ಟೆ ಯಲ್ಲಿ ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿ ಗಳು ಮಾರಣಕಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಸಂಬಳ ಬಿಡುಗಡೆ ಮಾಡು ವಂತೆ ಸೂಚನೆ ಕೊಟ್ಟಿದ್ದೇನೆ. ಪೂರ್ತಿ ಸಂಬಳ ಕೊಡುವ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ಪಾವತಿಯಾಗಲಿದೆ ಎಂದರು.
ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳನ್ನು ಅಂತರಜಿಲ್ಲೆಯ ಒಳಗಡೆ ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಒಳ್ಳೆಯ ಕೆಲವ ಮಾಡುವ ಸಿಬ್ಬಂದಿಗಳ ಸೇವೆ ಎಲ್ಲ ಕಡೆ ಸಿಗಬೇಕು ಎನ್ನುವ ಉದ್ದೇಶದಿಂದ ವರ್ಗಾವಣೆ ಬಗ್ಗೆ ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.
ಗೋಮಾಳ ಸಂರಕ್ಷಿಲು ಸರಕಾರ ಸೂಚಿಸಿದೆ. ಆದರೆ ಕೆಲವೆಡೆ ಬಡವರು ಗೋಮಾಳದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆ ಗೋಮಾಳ ಜಾಗಕ್ಕೆ ಹಕ್ಕು ಪತ್ರಗಳನ್ನು ಕೊಡುವ ವೇಳೆ ಮತ್ತೊಂದು ಸರಕಾರಿ ಜಾಗವನ್ನು ಕಾದಿರಿಸಿಕೊಂಡು ಕೊಡಬೇಕು. ಈ ಮೂಲಕ ಬಡವರಿಗೆ ಮನೆಯ ಜೊತೆಗೆ ಗೋಮಾಳ ರಕ್ಷಣೆ ಆದಂತೆಯೂ ಆಗುತ್ತದೆ ಎಂದು ಸಚಿವ ಕೋಟ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಈ ಆಡಿಯೋದಲ್ಲಿನ ಸ್ವರದ ಬಗ್ಗೆ ಸಂಶಯ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು. ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.







